ರಾಮನಗರ: ಗಣೇಶ ವಿಗ್ರಹ ತಯಾರಿಕೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪಿಓಪಿ (ಪ್ಲಾಸ್ಟರ್ ಆಫ್ ಪ್ಯಾರೀಸ್) ಗಣೇಶ ತಯಾರಕರು ಗ್ರಾಮ ಪಂಚಾಯ್ತಿ ಸದಸ್ಯೆಯೋರ್ವರ ಕಾರಿನ ಗ್ಲಾಸ್ ಪುಡಿಪುಡಿ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಗಚಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ವಿಜಯಲಕ್ಷ್ಮಿ ಅವರಿಗೆ ಸೇರಿದ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಲಾಗಿದೆ. ಪಿಓಪಿ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದ ಶ್ರೀನಿವಾಸ್, ಶಿವಶಂಕರ್, ಶ್ರೀಧರ್ ಎಂಬವರು ಪಿಓಪಿ ಗಣೇಶ ತಯಾರಿಕೆಗೆ ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಸಭೆಯಲ್ಲಿ ಪಿಒಪಿ ಬದಲಿಗೆ ಮಣ್ಣಿನ ಗಣೇಶನ ತಯಾರಿಕೆ ಮಾಡಲು ಅನುಮತಿ ನೀಡಲಾಗಿತ್ತು.
ಇದ್ರಿಂದ ಆಕ್ರೋಶಗೊಂಡ ಕಿಡಿಗೇಡಿಗಳು ರಾತ್ರಿ ಮನೆ ಬಳಿ ಬಂದು ಗಲಾಟೆ ನಡೆಸಿದ್ದಾರೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಘಟನೆ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.