ಚಿತ್ರದುರ್ಗ: ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಗಡಿಭಾಗದಲ್ಲಿರುವ ಶಾಲಾ ಕಾಲೇಜುಗಳಲ್ಲೇ ಕನ್ನಡ ಮಾತನಾಡೋದು, ಓದೋದು ಕಡಿಮೆ. ಹೀಗಾಗಿ ಉದ್ಯಾನವನಗಳಲ್ಲಿ ಮತ್ತು ಜನನಿಬಿಡ ಪ್ರದೇಶದಲ್ಲಿ ಕನ್ನಡ ಹಾಡನ್ನು ಹಾಡುತ್ತಾ ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ.
ಹಿರೆಕೇರೂರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಲೋಕೇಶ್ ಪಲ್ಲವಿ ಅವರು ಕನ್ನಡದ ಜಾಗೃತಿ ಹಾಡುಗಳ ಮೂಲಕ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಾಜ ಪರಿವರ್ತನೆಗಾಗಿ ಶ್ರಮವಹಿಸುತಿದ್ದಾರೆ.
Advertisement
Advertisement
ಲೋಕೇಶ್ ಪಲ್ಲವಿ ಅವರು ಕಳೆದ 15 ವರ್ಷಗಳಿಂದ ಜಾಗೃತಿ ಗೀತೆಗಳು, ಜಾನಪದ ಗೀತೆಗಳು, ಚಿತ್ರ ಗೀತೆಗಳು ಹಾಗೂ ದೇಶ ಭಕ್ತಿಗೀತೆಗಳನ್ನು ಸ್ವಯಂ ರಚಿಸಿ ಹಾಡುತ್ತಿದ್ದಾರೆ. ಇವರು ಆಂಧ್ರ ಹಾಗೂ ಕರ್ನಾಟಕದ ಗಡಿಭಾಗದಲ್ಲಿರುವ ಹಿರೆಕೇರೂರಹಳ್ಳಿಯ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದು, ಜಿಲ್ಲೆಯಾದ್ಯಂತ ನಡೆಯುವ ಜಾಗೃತಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಅನುಭವಿಸುವ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ, ಬಾಲಕಾರ್ಮಿಕ ಪದ್ಧತಿ ಹಾಗೂ ಸಾಮಾಜಿಕ ಅಸಮಾನತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
Advertisement
Advertisement
ಶಾಲೆಯಿಂದ ವಂಚಿತರಾದ ಮಕ್ಕಳನ್ನು ಶಾಲೆಗೆ ಕರೆತರುವಂತಹ ಆಕರ್ಷಕ ಹಾಡುಗಳನ್ನು ರಚಿಸಿರುವುದರ ಜೊತೆಗೆ ಹಲವು ಚಿತ್ರಗೀತೆಗಳನ್ನು ಸಹ ಲೋಕೇಶ್ ರಚಿಸಿದ್ದಾರೆ. ಇವರ ಸಾಮಾಜಿಕ ಕಳಕಳಿ ಹಾಗೂ ಜಾಗೃತಿ ಭಾವ ಕಂಡ ಜಿಲ್ಲೆಯ ಜನರು ಕೂಡ ಇವರನ್ನು ಮನಸಾರೆ ಹೊಗಳಿದ್ದು, ಸಾಮಾಜಿಕ ಪಿಡುಗುಗಳನ್ನು ನಿವಾರಣೆ ಮಾಡುವಲ್ಲಿ ಲೋಕೇಶ್ ಅವರ ಸೇವೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಇವರ ಸೇವೆ ಇನ್ನಷ್ಟು ಹೆಚ್ಚಾಗಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.
ಆಂಧ್ರ ಗಡಿಭಾಗದಲ್ಲಿದ್ದರೂ ಸಹ ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ತಮ್ಮ ಗಾಯನದ ಕಲೆಯನ್ನು ಉಳಿಸಿಕೊಳ್ಳುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡ್ತಿರೋ ಲೋಕೇಶ್ ಕಾರ್ಯ ಇತರರಿಗೆ ಮಾದರಿಯಾಗಿದೆ.