– ಮನೆಯಲ್ಲೇ ಕಾಶ್ಮೀರದ ಹವಾಮಾನ ಸೃಷ್ಟಿಸಿ ಬೆಳೆ ತೆಗೆದ ಯುವಕ; ರಾಜ್ಯದಲ್ಲಿ ಸಾಧನೆ
ದೊಡ್ಡಬಳ್ಳಾಪುರ: ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಓದಿ ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದ ಯುವಕನೊರ್ವ ಕಾಶ್ಮೀರದಲ್ಲಿ ಬೆಳೆಯುವ ಕೇಸರಿಯನ್ನ (Kashmir Kesar) ಬೆಂಗಳೂರು ಗ್ರಾಮಾಂತರದಲ್ಲಿ ಅದ್ರಲ್ಲೂ ಮನೆಯ ಕೋಣೆಯೊಂದರಲ್ಲೇ ಬೆಳೆದು ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ.
ಹೌದು. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದ ಮಾರುತಿ ನಗರದ ನಿವಾಸಿ ಪವನ್ ಈ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿ ಸೈ ಅನಿಸಿಕೊಂಡು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದಾನೆ. 24 ವರ್ಷದ ಯುವಕ ಪವನ್ ತಮ್ಮ ಮನೆಯಲ್ಲಿಯೇ ಕಾಶ್ಮೀರದ ಹವಾಮಾನ ಸೃಷ್ಟಿ ಮಾಡಿ ಕೇಸರಿ ಬೆಳೆದು ಯಶಸ್ವಿಯಾಗಿದ್ದಾನೆ.
ಬೆಳೆಯುವ ವಿಧಾನ ಹೇಗೆ?
ಅಂದಹಾಗೆ ಈ ಕೇಸರಿ ಗಡ್ಡೆ ವರ್ಷದಲ್ಲಿ ಒಮ್ಮೆ ಮಾತ್ರ ಕೇಸರಿ ಹೂ (Saffron Flower) ಬಿಡುತ್ತೆ. ಅದೂ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ. ಬಳಿಕ ವಾರದಲ್ಲಿ ಹೂ ಖಾಲಿಯಾದ್ರೆ ಮತ್ತೆ ಕೇಸರಿ ಹೂ ಬರುವುದು ಮುಂದಿನ ವರ್ಷಕ್ಕೆ. ಏಪ್ರಿಲ್ ತಿಂಗಳಲ್ಲಿ ಕೇಸರಿ ಗಡ್ಡೆ ನಾಟಿ ಮಾಡಲಾಗುತ್ತದೆ. ಅದು ಸೆಪ್ಟೆಂಬರ್ ತಿಂಗಳಲ್ಲಿ ಮೊಳಕೆ ಬಿಡಲು ಶುರು ಮಾಡಿ, ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತೆ. ಹೂ ಬಿಟ್ಟಾಗ ಹೂವಿನಿಂದ ಸಲಾಕೆಯ ರೂಪದಲ್ಲಿ ಕೇಸರಿ ಹೊರಗಡೆ ಬರುತ್ತೆ.
ದಾಸವಾಳದ ಹೂವಿನ ಮಧ್ಯದಿಂದ ಬರುವ ಸಲಾಕೆಯಂತೆ ಇಲ್ಲಿಯೂ ಕೇಸರಿ ಸಲಾಕೆಗಳು ಹೂವಿನಿಂದ ಆಚೆ ಬರುತ್ತವೆ. ಅವುಗಳನ್ನು ಹೂವುಗಳಿಂದ ಹುಷಾರಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತದೆ. ಕಾಶ್ಮೀರದ ಭೂಮಿಯಲ್ಲಿ ಬೆಳೆಯುವ ಕೇಸರಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕಲಾಗುತ್ತದೆ. ಆದ್ರೆ ಇಲ್ಲಿ ಒಂದು ರೂಮಿನಲ್ಲಿ ಅದಕ್ಕೆ ಬೇಕಾದ ವಾತಾವರಣವನ್ನ ಸೃಷ್ಟಿ ಮಾಡಿ ಕಾಶ್ಮೀರ ಕೇಸರಿ ಬೆಳೆಯಲಾಗಿದೆ ಅಂತ ಪವನ್ ಹೇಳಿದರು.
ಕೃಷಿಗೆ ಜಮೀನಿಲ್ಲ ಅಂತ ಕೈಕಟ್ಟಿ ಕೂರದ ಪವನ್!
ಅಂದಹಾಗೆ ಕೃಷಿಯಲ್ಲಿ (Agriculture) ಏನಾದ್ರು ಸಾಧನೆ ಮಾಡಬೇಕೆಂದು ಹೊರಟ ಯುವಕ ಪವನ್‌ಗೆ ಜಮೀನಿರಲಿಲ್ಲ. ಜಮೀನು ಇಲ್ಲದಿದ್ರೆ ಏನು ಅಂತಾ ತನ್ನ ಮನೆಯ ಒಂದು ಕೋಣೆಯಲ್ಲೇ ಸಂಪೂರ್ಣವಾಗಿ ಕಾಶ್ಮೀರದ ಹವಾಮಾನ ಸೃಷ್ಟಿಸಿ ಕಬ್ಬಿಣದ ರ‍್ಯಾಕ್‌ಗಳನ್ನಿಟ್ಟು ಸುಮಾರು 45 ಕೆಜಿ ಕೇಸರಿ ಗಡ್ಡೆಗಳನ್ನ ತಂದು ಬೆಳೆ ತೆಗೆದಿದ್ದಾನೆ. ಇನ್ನೂ ಐದರಿಂದ 7 ವರ್ಷಗಳ ವರೆಗೆ ಕೇಸರಿ ಗಡ್ಡೆ ಹೂಗಳನ್ನು ಬಿಡುತ್ತೆ. ಇದರಿಂದ ರೈತರಿಗೆ ಲಾಭವೂ ಸಿಗುತ್ತದೆ. ಅಲ್ಲದೇ ಕ್ಯಾನ್ಸರ್‌ಗೆ ಔಷಧೀಯ ಗುಣಗಳನ್ನ ಹೊಂದಿರುವ ಅಂಶಗಳು ಈ ಕೇಸರಿಯಲ್ಲಿದ್ದು ಮಾರುಕಟ್ಟೆಯಲ್ಲಿ ಕೇಸರಿಗೆ ಹೆಚ್ಚಿನ ಡಿಮ್ಯಾಂಡ್ ಇದೆಯಂತೆ. ಇನ್ನೂ ಕಾಶ್ಮೀರದಲ್ಲಿ ಪ್ರತಿ ಗ್ರಾಂ ಕೇಸರಿಗೆ 900 ರೂ.ಗಳಿಂದ 1,500 ರೂ. ವರೆಗೆ ದರ ಇದೆ. ಇದನ್ನ ಅಂಗಡಿಯವರು, ಬೇಕರಿಯವರು ಮತ್ತು ಅಡುಗೆಯವರು ಖರೀದಿ ಮಾಡುತ್ತಾರಂತೆ. ಸದ್ಯಕ್ಕೆ ಯುವಕ 45 ಕೆಜಿ ಗಡ್ಡೆಗಳಲ್ಲಿ 50 ಗ್ರಾಂ ನಷ್ಟು ಕೇಸರಿ ಬೆಳೆಯಲು ಮುಂದಾಗಿದ್ದು ಮೊದಲ ಭಾರಿಗೆ 50 ಸಾವಿರ ಆದಾಯ ಬರಲಿದ್ದು, ಈ ಆದಾಯ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗಲಿದೆಯಂತೆ. ಯುವಕ ಪವನ್ ಕೇಸರಿ ಕೃಷಿಗೆ ಮನೆಯವರ ಸಾಥ್ ಕೂಡ ಸಾಕಷ್ಟಿದೆ.



