ಬೆಂಗಳೂರು/ಮಂಗಳೂರು: ಹೋಂ ಕ್ವಾರಂಟೈನ್ ಆದವರು ಎಲ್ಲಿದ್ದಾರೆ? ಹೇಗಿದ್ದಾರೆ? ಎನ್ನುವ ಭಾವಚಿತ್ರ ಸಮೇತ ಲೈವ್ ಅಪ್ಡೇಟ್ ಕೊಡುವ ಮಾಹಿತಿ ಮೊದಲ ಬಾರಿಗೆ ಕಾರ್ಯರೂಪಕ್ಕೆ ಬರಲಿದೆ. ವಾರ್ ರೂಮ್‍ನಲ್ಲಿಯೇ ಕೂತು ಗೃಹಬಂಧನದಲ್ಲಿದ್ದವರ ಮೇಲೆ ಹದ್ದಿನಗಣ್ಣು ಇಡಲಾಗುತ್ತದೆ.
ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರ ಕೈಗೆ ಸ್ಟಾಂಪ್ ಹಾಕಿದ್ದರೂ ಸಾರ್ವಜನಿಕ ಸ್ಥಳದಲ್ಲಿ ಓಡಾಟ ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಅವರ ಮಾಹಿತಿಗೆ ಜಿಪಿಎಸ್ ಆಧಾರಿತ ಆ್ಯಪ್ ಬಳಕೆಗೆ ದಕ್ಷಿಣ ಕನ್ನಡದ ಬೆಳ್ತಂಗಡಿ ಸಜ್ಜಾಗಿದೆ.
ಹೋಂ ಕ್ವಾರಂಟೈನ್ ಸ್ಟಾಂಪ್ ಹಾಕಿಸಿಕೊಂಡವರನ್ನು ಮನೆಯಲ್ಲೇ ಇರಿಸಿ ನಿಗಾ ವಹಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆ ಐಸರ್ಚ್ ಎಂಬ ಸಂಸ್ಥೆಯ ನೆರವಿನಿಂದ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ. COVID19 BLT DATABASE ಅನ್ನುವ ಈ ಆಪ್ ಬೆಳ್ತಂಗಡಿ ತಾಲೂಕು ಆಡಳಿತ, ತಹಶೀಲ್ದಾರರು, ಪೊಲೀಸ್ ಇಲಾಖೆ, ಆರೋಗ್ಯ, ಕಂದಾಯ, ನಾಗರೀಕ ಸರಬರಾಜು ಇಲಾಖೆ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐಸರ್ಚ್ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆಪ್ ಬಳಸಿ ಸೋಂಕಿತರ ಮೇಲೆ ನಿಗಾ ಇಡುವ ಕಾರ್ಯಕ್ಕೆ ಮುಂದಾಗಿದೆ.
ಈ ಪ್ರಯತ್ನ ದೇಶದಲ್ಲೇ ಮೊದಲನೆಯಾದಾಗಿದೆ. ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದ್ದು, ಇಲಾಖೆಗಳ ಉಪಯೋಗಕ್ಕೆ ನೀಡಲಾಗುತ್ತದೆ. ತಾಲೂಕಿನ ತಣ್ಣೀರುಪಂಥ ಗ್ರಾಮದಲ್ಲಿ ಒಂದು ಕೋವಿಡ್-19 ಪ್ರಕರಣ ಬೆಳಕಿಗೆ ಬಂದ ಬಳಿಕ ಈ ತಂತ್ರಜ್ಞಾನ ಬಳಸಲು ಯೋಜನೆ ಮಾಡಲಾಯಿತು. ಹೋಮ್ ಕ್ವಾರಂಟೈನ್ ಆಗಿರುವವರ ಮೇಲೆ ಅಧಿಕಾರಿಗಳಿಗೆ ನಿಗಾ ಇರಿಸಲು ಈ ವ್ಯವಸ್ಥೆ ನೆರವಾಗಲಿದೆ.
ಜಿಪಿಎಸ್ ಆಧಾರಿತ ಆಪ್ ಮೂಲಕ ವಾರ್ ರೂಮ್‍ನಲ್ಲಿ ಕೂತು ಹೋಮ್ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ? ಹೇಗಿದ್ದಾರೆ? ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಈ ಆ್ಯಪ್ ಕೋವಿಡ್-19 ಶಂಕಿತರನ್ನು ಟ್ರಾಕ್ ಮಾಡುವ ಮುಖಾಂತರ ಸೋಂಕು ಇತರರಿಗೆ ಹರಡುವುದನ್ನು ತಡೆಗಟ್ಟಲು ಸಹಕರಿಸಲಿದೆ.