Connect with us

Bengaluru City

ವರ್ಷಾಂತ್ಯಕ್ಕೆ ಸಾಲು ಸಾಲು ಸಿನಿಮಾ- ಪ್ರೇಕ್ಷಕರನ್ನು ಮನರಂಜಿಸಲು ಮಫ್ತಿ, ಗೌಡ್ರು ಹೋಟೆಲ್ ರೆಡಿ!

Published

on

ಬೆಂಗಳೂರು: ವರ್ಷದ ಕೊನೆಯಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರನ್ನ ಮೋಡಿ ಮಾಡಲು ಬರುತ್ತಿವೆ. ಅದರಲ್ಲೂ ಈ ವಾರ ತೆರೆಕಾಣುತ್ತಿರುವ ಎರಡು ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾದು ಕುಳಿತ್ತಿದ್ದರು.

2017ರ ಕೊನೆಯ ತಿಂಗಳಲ್ಲಿ ಸ್ಯಾಂಡಲ್‍ವುಡ್ ಮಸ್ತ್ ಮನೋರಂಜನೆ ನೀಡಲು ಸಜ್ಜಾಗಿದ್ದು, ಈ ವಾರ `ಮಫ್ತಿ’, `ಗೌಡ್ರು ಹೋಟೆಲ್’, `ಮಂತ್ರಂ’, `ಡ್ರೀಮ್ ಗರ್ಲ್’ ಸಿನಿಮಾಗಳು ತೆರೆಕಂಡಿವೆ.

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಮಫ್ತಿ ರಾಜ್ಯಾದ್ಯಂತ ಸುಮಾರು 400ಕ್ಕೂ ಹೆಚ್ಚು ಥಿಯೇಟರ್‍ಗಳಲ್ಲಿ ಪ್ರದರ್ಶನಗೊಳ್ತಿದೆ. ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಶ್ರೀಮುರುಳಿ ಅಭಿನಯಿಸಿರುವ ಚಿತ್ರದ ಟ್ರೇಲರ್ ಈಗಾಗಲೇ ಯೂಟ್ಯೂಬ್‍ನಲ್ಲಿ ಹವಾ ಎಬ್ಬಿಸಿದೆ. ಮಫ್ತಿ ಮೂಲಕ ನರ್ತನ್ ತಮ್ಮ ಮೊದಲ ಸಿನಿಮಾದಲ್ಲೇ ನಿರ್ದೇಶನದ ಕೌಶಲ್ಯ ತೋರಿಸಿದ್ದಾರೆ. ಖ್ಯಾತ ನಿರ್ಮಾಪಕ ಜೋಡಿ ಜಯಣ್ಣ, ಭೋಗೇಂದ್ರ ನಿರ್ಮಾಣದೊಂದಿಗೆ ಕುಂದಾಪುರದ ಸಕಲಕಲಾವಲ್ಲಭ ರವಿ ಬಸ್ರೂರ್ ಅವರ ಸಂಗೀತದಲ್ಲಿ ಚಿತ್ರ ಮೂಡಿಬಂದಿದೆ.

ಮತ್ತೊಂದು ಸಿನಿಮಾ `ಗೌಡ್ರು ಹೋಟೆಲ್’ ತೆರೆ ಕಂಡಿದ್ದು, ಮಾಲಿವುಡ್‍ನಲ್ಲಿ ಸೂಪರ್ ಹಿಟ್ ಆಗಿದ್ದ `ಉಸ್ತಾದ್ ಹೋಟೆಲ್’ ಸಿನಿಮಾವನ್ನು ಕನ್ನಡಕ್ಕೆ `ಗೌಡ್ರು ಹೋಟೆಲ್’ ಹೆಸರಿನಲ್ಲಿ ಖ್ಯಾತ ನಿರ್ದೇಶಕ ಪಿ.ಕುಮಾರ್ ತಂದಿದ್ದಾರೆ. ಎಮಿನೆಂಟ್ ಮೂವೀ ಮೇಕರ್ಸ್ ನಿರ್ಮಾಣದಲ್ಲಿ `ಗೌಡ್ರು ಹೋಟೆಲ್’ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಕಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ಹಾಡುಗಳಿಗೆ ತಂತಿ ಮೀಟಿದ್ದಾರೆ. ಈ ಸಿನಿಮಾ ಒಂದು ತಾತ-ಮೊಮ್ಮಗನ ಬಾಂಧವ್ಯದ ಕಥೆಯಾಗಿದ್ದು, ಪ್ರಕಾಶ್ ರೈ ತಾತನಾಗಿ, ಲಂಡನ್‍ನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ರಚನ್ ಚಂದ್ರ ಮೊಮ್ಮಗನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಮೊಮ್ಮಗನಾಗಿ ಕ್ಯಾಮೆರಾ ಎದುರಿಸಿದ್ದು, ರಚನ್‍ಗೆ ಜೋಡಿಯಾಗಿ ನಟಿ ವೇದಿಕಾ ಸಾಥ್ ನೀಡಿದ್ದಾರೆ.

ಮೂರನೇ ಸಿನಿಮಾ `ಡ್ರೀಮ್ ಗರ್ಲ್’. ರಿಂಗ್ ರೋಡ್ ಶುಭ ಸಿನಿಮಾದ ನಂತರ ಪಟ್ರೆ ಅಜಿತ್ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಅಮೃತಾ ರಾವ್ ಮತ್ತು ದೀಪಿಕಾ ದಾಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಲಕ್ಷಣ್ ನಾಯಕ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಂಧರ್ವ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಡ್ರೀಮ್ ಗರ್ಲ್’ ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿದೆ.

ನಾಲ್ಕನೇ ಸಿನಿಮಾ `ಮಂತ್ರಂ’. ಟ್ರೇಲರ್‍ನಿಂದಲೇ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದ ಸಿನಿಮಾ ಇದಾಗಿದ್ದು, ನೈಜ ಘಟನೆಯ ಆಧಾರವಿಟ್ಟುಕೊಂಡು ಕಥೆಯನ್ನು ಎಣೆಯಲಾಗಿದೆ. ಎಸ್.ಎಸ್. ಸಜ್ಜನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮಣಿಶೆಟ್ಟಿ ಹಾಗೂ ಪಲ್ಲವಿ ಸಿನಿಮಾದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ರಷೀದ್ ಖಾನ್ ಸಂಗೀತ ನಿರ್ದೇಶನ ಮಾಡಿದ್ದು, ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

 

 

Click to comment

Leave a Reply

Your email address will not be published. Required fields are marked *