ನವದೆಹಲಿ: 2019ರ ವೇಳೆಗೆ ಐದು ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವರಾದ ನಿತಿತ್ ಗಡ್ಕರಿ ತಿಳಿಸಿದ್ದಾರೆ.
ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು, ಅದರ ಹರಿವಿನ ಪಥವನ್ನು ಮತ್ತೊಂದು ನದಿಗೆ ಜೋಡಣೆ ಮಾಡುವ ಮೂಲಕ ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯುಂಟು ಮಾಡುವ ನಿರೀಕ್ಷೆಯೊಂದಿಗೆ ಕೇಂದ್ರ ಸರ್ಕಾರ ಐದು ನದಿಗಳ ಜೋಡಣೆಗೆ ಯೋಜನೆ ರೂಪಿಸಿದೆ. ವಿಶ್ವಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಸಾಲದ ನೆರವಿನಿಂದ ಸುಮಾರು 2 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಈ ನದಿ ಜೋಡಣೆಯ ಬೃಹತ್ ಕಾಮಗಾರಿ ಯೋಜನೆಯು ವೇಗ ಪಡೆಯಲಿದೆ ಎಂದು ಜಲಸಂಪನ್ಮೂಲ ಸಚಿವರಾದ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ.
Advertisement
Advertisement
ರಾಜ್ಯಸಭೆಯಲ್ಲಿ ಸೋಮವಾರ ನದಿ ಜೋಡಣೆ ವಿಚಾರ ಕುರಿತು ಮಾಹಿತಿ ಹಂಚಿಕೊಳ್ಳುವ ಮೂಲಕ ಪ್ರತಿಪಕ್ಷ ಸದಸ್ಯರು ನದಿ ಜೋಡಣೆ ಕುರಿತು ಎದ್ದಿದ್ದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.
Advertisement
ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಗೆ ಮೊದಲ ಹಂತದ ಐದು ನದಿಗಳ ಜೋಡಣೆಯಿಂದ ಲಾಭವಾಗಲಿದೆ. ಗೋದಾವರಿ-ಕಾವೇರಿ, ಪಾರ್-ತಾಪಿ-ನರ್ಮದಾ, ಕ್ವೆನ್-ಬೆಟ್ವಾ, ದಮನ್‍ಗಂಗಾ-ಪಿಂಜಾಲ್, ಪಾರ್‍ಬತಿ-ಕಾಳಿಸಿಂಧ್-ಚಂಬಲ್ ನದಿ ಜೋಡಣೆ ಯೋಜನೆಗಳ ಕುರಿತು ಯೋಜನಾ ಕಾರ್ಯಸಾಧ್ಯತೆ ವರದಿ ಸಿದ್ಧಗೊಂಡಿದ್ದು ಸದ್ಯದಲ್ಲೇ ರಾಜ್ಯಗಳ ನಡುವೆ ಒಪ್ಪಂದ ಏರ್ಪಡಲಿದೆ. ಯೋಜನೆ ಸಾಕಾರಕ್ಕೆ ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುವುದರ ಜತೆಗೆ ಖಾಸಗಿ ಹೂಡಿಕೆದಾರರನ್ನೂ ಸೆಳೆಯಲಿವೆ ಎಂದು ಸಚಿವರು ಹೇಳಿದರು.
Advertisement
ಅಲ್ಲದೇ ಗೋದಾವರಿ ನೀರನ್ನು ಕೃಷ್ಣ ನದಿಯ ಮೂಲಕ ಪೆನ್ನಾರ್ ನದಿಗೆ ಸಂಪರ್ಕಿಸಿ, ನಂತರ ಪೆನ್ನಾರ್ ನದಿಯಿಂದ ಕಾವೇರಿ ನದಿಗೆ ಜೋಡಣೆ ಮಾಡುವುದರಿಂದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನಡೆಯುತ್ತಿರುವ ನೀರಿನ ಸಮಸ್ಯೆ ನೀಗುತ್ತದೆ. ಈ ಎರಡು ರಾಜ್ಯಗಳು ಕೇವಲ 40 ಟಿಎಂಸಿ ನೀರಿಗಾಗಿ ಜಗಳ ಮಾಡುತ್ತಿದ್ದರೆ, ಸುಮಾರು 3,000 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ. ಯೋಜನೆಯಿಂದ ಎರಡು ರಾಜ್ಯಗಳ ನಡುವಿನ ನೀರಿನ ಕಿತ್ತಾಟ ನಿವಾರಣೆಯಾಗಲಿದೆ ಎಂದು ಗಡ್ಕರಿ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews