ಬೆಂಗಳೂರು: ಇದೇ ತಿಂಗಳು 25 ಮತ್ತು 26 ನೇ ದಿನಾಂಕದಂದು ನಡೆಯುವ ವಿಧಾನಸೌಧದ ವಜ್ರಮಹೋತ್ಸವ ಸಮಾರಂಭ ಹೆಜ್ಜೆ ಹೆಜ್ಜೆಗೂ ವಿವಾದಕ್ಕೆ ಗುರಿಯಾಗುತ್ತಿದೆ.
ಮೊನ್ನೆಯ ತನಕ ಚಿನ್ನದ ಬಿಸ್ಕೆಟ್ ಗಿಫ್ಟ್ ವಿವಾದ ಎದುರಿಸುತ್ತಿದ್ದು ಇದೀಗ ಇತಿಹಾಸ ಸೃಷ್ಟಿ ಮಾಡುವ ಐತಿಹಾಸಿಕ ಅಧಿವೇಶನಕ್ಕೆ ಶಾಸಕರು ಟಿಎ ಮತ್ತು ಡಿಎ ಕೊಡಬೇಕಂತೆ. ಇಲ್ಲಿ ಇಂಟ್ರಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಒಂದು ದಿನ ಅಧಿವೇಶನ ನಡೆದ್ರು 5 ದಿನ ಶಾಸಕರಿಗೆ ಡಿಎ ಕೊಡಬೇಕು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
Advertisement
50 ಸಾವಿರ ರೂಪಾಯಿ ಮೊತ್ತದ ಚಿನ್ನದ ಬಿಸ್ಕೆಟ್ ಬೇಡ ಎಂದ ಶಾಸಕರು, ಅದೇ ಮೊತ್ತದ ಟಿಎ ಮತ್ತು ಡಿಎ ಬೇಕು. ಒಂದು ದಿನದ ಅಧಿವೇಶನಕ್ಕೆ ಬರೋಬ್ಬರಿ 1.20 ಕೋಟಿ ರುಪಾಯಿ ವೆಚ್ಚವಾಗಲಿದಯಂತೆ. ಐತಿಹಾಸಿಕ ಜಂಟಿ ಅಧಿವೇಶನಕ್ಕೂ ಶಾಸಕರು ಟಿಎ, ಡಿಎ ಬೇಕು ಅಂತ ಜೋತು ಬಿದ್ದಿರೋದು ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
Advertisement
Advertisement
ದುಂದುವೆಚ್ಚಕ್ಕೆ ಸಿಎಂ ಕಡಿವಾಣ: ಇತ್ತೀಚೆಗಷ್ಟೇ ವಿಧಾನ ಸಭೆಯ ಸ್ಪೀಕರ್ ಕೋಳಿವಾಡ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಸಿಎಂ ಗೆ ವಜ್ರಮಹೋತ್ಸವದ ಖರ್ಚು-ವೆಚ್ಚದ ವಿವರ ನೀಡಲು ಮುಂದಾದ್ರು.
Advertisement
ಇದನ್ನು ಪರಿಶೀಲಿಸಿದ ಸಿಎಂ ವಜ್ರಮಹೋತ್ಸವಕ್ಕೆ 26 ಕೋಟಿ ತೆಗೆದುಕೊಂಡು ಏನು ಮಾಡುತ್ತೀರಾ?. ನನಗೆ ಯಾವ ವಿವರವನ್ನು ನೀಡುವುದು ಬೇಡ. 26 ಕೋಟಿ ಪ್ರಸ್ತಾವನೆ, ಶಾಸಕರಿಗೆ ಚಿನ್ನದ ಬಿಸ್ಕತ್ ನೀಡುವುದು ಹಾಗೂ ನೌಕರರಿಗೆ ಬೆಳ್ಳಿ ತಟ್ಟೆ ನೀಡುವ ವಿಚಾರ ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ. ಯಾರಿಗೂ ಯಾವ ದುಬಾರಿ ಗಿಫ್ಟ್ ಬೇಡ. ನಾನು ಕೊಡುವುದು ಹತ್ತು ಕೋಟಿ ಮಾತ್ರ. ಅದರಲ್ಲೇ ಎಲ್ಲವನ್ನೂ ಒಂದೇ ದಿನದಲ್ಲಿ ಕಾರ್ಯಕ್ರಮ ಮುಗಿಸಬೇಕು ಅಂತ ಇದೇ ಮೊದಲ ಬಾರಿಗೆ ಸ್ಪೀಕರ್ ಮತ್ತು ಸಭಾಪತಿ ಅವರಿಗೆ ಖಡಕ್ ಸೂಚನೆ ನೀಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.
ರಾಜ್ಯದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಜ್ರಮಹೋತ್ಸವ ಕಾರ್ಯಕ್ರಮವನ್ನು 10 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡುವಂತೆ ಸೂಚಿಸಿದ್ದರು. ಈ ಮೂಲಕ ದುಂದು ವೆಚ್ಚದ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿದ್ದರು. ಅಲ್ಲದೇ ಇದೇ ತಿಂಗಳ 25, 26ರಂದು ಎರಡು ದಿನ ನಡೆಯಬೇಕಿದ್ದ ಕಾರ್ಯಕ್ರಮವು 25ರಂದು ಒಂದು ದಿನ ಮಾತ್ರ ನಡೆಸುವಂತೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿತ್ತು.
ಸಾಕ್ಷ್ಯಚಿತ್ರ: ವಜ್ರಮಹೋತ್ಸವ ಸಮಾರಂಭ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಆದರೆ ಈ ವಜ್ರಮಹೋತ್ಸಕ್ಕೆ ಸಾಕ್ಷ್ಯಚಿತ್ರಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಇನ್ನು 8 ತಿಂಗಳು ಸಮಯ ಬೇಕಾಗಿದೆ. ಇದು ಕೇವಲ ಸಾಕ್ಷ್ಯಚಿತ್ರವಲ್ಲ, ನಮ್ಮ ಇತಿಹಾಸದ ಮರುಸೃಷ್ಟಿ ಎಂದು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಹೇಳಿದ್ದರು.
1950 ರಿಂದ ಇಲ್ಲಿಯ ತನಕ ವಿಧಾನಸಭೆ ನಡೆದು ಬಂದಿರುವ ಹಾದಿಯನ್ನು ಮರುಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ ಇಡೀ ವಿಧಾನಸಭೆಯ ಮಾದರಿ ಸೆಟ್ ಹಾಕಿ, ಮರುಸೃಷ್ಟಿ ಮಾಡಲಾಗುತ್ತದೆ. ಕರ್ನಾಟಕದ ಔನ್ಯತೆಗಾಗಿ ತೆಗೆದುಕೊಂಡಿರುವ ಇತಿಹಾಸ ಪ್ರಸಿದ್ಧ ತೀರ್ಮಾನಗಳು ಕೂಡ ಇದರಲ್ಲಿ ಅಡಕವಾಗಿರುತ್ತವೆ. ಪ್ರಮುಖವಾಗಿ ನಾಲ್ಕು ಗಂಟೆಗಳ ಕಾಲದ ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ.
https://www.youtube.com/watch?v=xXietK2yVTY