ರಾಯಚೂರು: ಸೆಪ್ಟಂಬರ್ ತಿಂಗಳು ಅಂದ್ರೆ ಅದು ಶಿಕ್ಷಕರಿಗೆ ಮೀಸಲು. ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುವ ಉತ್ತಮ ಶಿಕ್ಷಕರನ್ನ ಗುರುತಿಸಿ ಇಡೀ ತಿಂಗಳು ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಆದರೆ ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕ ಕಂ ಮುಖ್ಯೋಪಾಧ್ಯಾಯನೊಬ್ಬ ಶಾಲೆಗೆ ಬರದೇ ಕಂಠಪೂರ್ತಿ ಮದ್ಯ ಕುಡಿದು ಊರ ತುಂಬೆಲ್ಲಾ ತೂರಾಡುತ್ತಿರುತ್ತಾನೆ.
Advertisement
ಸಿಂಧನೂರು ತಾಲೂಕಿನ ಮೀರಾಪುರ ಕ್ಯಾಂಪ್ ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಾರುತಿ ರಾಠೋಡ್‍ನನ್ನ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ. ನಿತ್ಯ ಕುಡಿದು ಟೈಟಾಗಿ ಶಾಲೆ, ರಸ್ತೆ ಎಲ್ಲೆಂದರಲ್ಲಿ ಮಲಗಿರುತ್ತಾನೆ. ಮಕ್ಕಳಿಗೆ ಪಾಠ ಹೇಳಿ ಅವರ ಭವಿಷ್ಯ ನಿರ್ಮಿಸುವ ಜವಾಬ್ದಾರಿ ಹೊತ್ತಿರೋ ಶಿಕ್ಷಕ ಇವನು. ಶಾಲೆಯ ಮುಖ್ಯೋಪಾಧ್ಯಾಯ ಆಗಿರುವುದರಿಂದ ಮನಸ್ಸಿಗೆ ಬಂದಾಗ ಶಾಲೆಗೆ ಬಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿ ಕುಡಿದು ಊರೆಲ್ಲಾ ತೂರಾಡಿಕೊಂಡಿರುತ್ತಾನೆ.
Advertisement
Advertisement
ಮೇಷ್ಟ್ರು ಪಾಠ ಹೇಳ್ತಾರೆ ಅಂತ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ನಿತ್ಯವೂ ನಿರಾಸೆ. ಈ ಕುಡುಕ ಮೇಷ್ಟ್ರಿಗೆ ಟೈಮ್ ಟೇಬಲ್ ಇಲ್ಲ. ಹೀಗಾಗಿ ಶಾಲೆಯ ಎಲ್ಲಾ ಕೋಣೆಗಳಿಗೂ ಯಾವಾಗಲೂ ಬೀಗ ಜಡಿದಿರುತ್ತೆ. ಮಾರುತಿ ರಾಠೋಡ್ ಅವಾಂತರ ಇಷ್ಟಕ್ಕೆ ಮುಗಿದಿಲ್ಲ. ಇವನ ದುರ್ವರ್ತನೆಯಿಂದ ಸಂಬಳ ತಡೆ ಹಿಡಿದರೆ ಕುಡಿದ ಅಮಲಿನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಜಗಳ ಆಡುತ್ತಾನೆ.
Advertisement
ಮುಖ್ಯೋಪಾಧ್ಯಾಯನ ವಿರುದ್ಧ ದೂರು ನೀಡಿ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಈಗ ಕ್ರಮಕ್ಕೆ ಮುಂದಾಗಿರುವ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಮೊದಲೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನ ಕಳುಹಿಸಲು ಪೋಷಕರು ಹಿಂಜರಿಯುತ್ತಿರುವ ಹೊತ್ತಲ್ಲಿ ಇಂತಹ ಶಿಕ್ಷಕರು ಇನ್ನಷ್ಟು ಬೇಸರ ಮೂಡಿಸುತ್ತಿದ್ದಾರೆ.