ಹಾಸನ: ಸರ್ಕಾರ ಮಕ್ಕಳಿಗೆ ಉಚಿತ ಹಾಗೂ ಉತ್ತಮ ಶಿಕ್ಷಣ ನೀಡೋದಾಗಿ ಬಡಾಯಿ ಕೊಚ್ಚಿಕೊಳ್ಳುತ್ತೆ. ಆದರೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು ನೂರು ಮಕ್ಕಳು ಓದುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಸರಿಯಾದ ಕಟ್ಟಡ ಇಲ್ಲದೆ, ಬಿರುಕು ಗೋಡೆಯ ಕೊಠಡಿಯಲ್ಲಿ ಮಕ್ಕಳು ಕುಳಿತು ಪಾಠ ಕೇಳುವಂತಾಗಿದೆ. ಇದರಿಂದ ಮಕ್ಕಳು ಮತ್ತು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿವೆ. ಆದರೆ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಸುಮಾರು ನೂರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೂ ಕೂಡ ಸರಿಯಾದ ಕಟ್ಟಡ, ಶೌಚಾಲಯ ಇಲ್ಲದೆ, ಪ್ರತಿನಿತ್ಯ ಮಕ್ಕಳು ಸಂಕಟ ಪಡುವಂತಾಗಿದೆ. ಮಕ್ಕಳು ಕುಳಿತು ಪಾಠ ಕೇಳುವ ತರಗತಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿವೆ. ವಿಧಿಯಿಲ್ಲದೆ ಜೀವ ಕೈಲಿಡಿದು, ಮಕ್ಕಳು ಅದೇ ತರಗತಿಯೊಳಗೆ ಕುಳಿತು ಪಾಠ ಕೇಳುವಂತಾಗಿದೆ. ಇದನ್ನೂ ಓದಿ: ಹಾಂಕಾಂಗ್ ತೇಲುವ ಜಂಬೋ ರೆಸ್ಟೋರೆಂಟ್ ಕುಸಿದಿದೆ, ಮುಳುಗಿಲ್ಲ: ಸ್ಪಷ್ಟನೆ ಕೊಟ್ಟ ಮಾಲೀಕ
ಈ ಹಿನ್ನೆಲೆ ವಿದ್ಯಾರ್ಥಿಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಮಳೆ ಬಂದ್ರೆ ನಾವು ನೆಂದು ಹೋಗ್ತೇವೆ. ನಮಗೆ ಸರಿಯಾದ ಶಾಲಾ ಕೊಠಡಿ ಕಟ್ಟಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶೌಚಾಲಯವೇ ಇಲ್ಲ
ಸುಮಾರು ನೂರು ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಸರಿಯಾದ ಶೌಚಾಲಯವೇ ಇಲ್ಲ. ಹೀಗಾಗಿ ಮಕ್ಕಳು ಬಯಲು ಶೌಚಾಲಯವನ್ನೇ ಆಶ್ರಯಿಸುವಂತಾಗಿದೆ. ಬಯಲುಮುಕ್ತ ಶೌಚಾಲಯದ ಬಗ್ಗೆ ಮಾತನಾಡುವ ಸರ್ಕಾರ ವಿದ್ಯಾರ್ಥಿಗಳಿಗೆ ಕನಿಷ್ಟ ಶೌಚಾಲಯ ವ್ಯವಸ್ಥೆ ಮಾಡಲು ಕೂಡ ಮೀನಾಮೇಷ ಎಣಿಸುತ್ತಿದೆ. ತಮ್ಮ ಮಕ್ಕಳು ಜೀವ ಭಯದಲ್ಲಿ ಇಂತಹ ಶಾಲೆಯಲ್ಲಿ ಓದುವ ಬದಲು, ನಾವು ಸಾಲ ಮಾಡಿಯಾದರೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುತ್ತೇವೆ ಎಂದು ಕೆಲವು ಪೋಷಕರು ಟಿಸಿ ಪಡೆದು ಹೋಗುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ
ಸುಸಜ್ಜಿತ ಕಟ್ಟಡ ಹಾಗೂ ಶೌಚಾಲಯಕ್ಕಾಗಿ ಈಗಾಗಲೇ ಗ್ರಾಮಸ್ಥರು ಹಲವು ಅಧಿಕಾರಿಗಳ ಮೊರೆ ಹೋಗಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಕುಸಿದು ಏನಾದರೂ ಅವಾಂತರ ಆಗುವ ಮೊದಲು, ಸರ್ಕಾರ ಈ ಶಾಲೆಗೆ ಒಳ್ಳೆಯ ಕಟ್ಟಡ ಕಟ್ಟಿಕೊಡಲು ತಕ್ಷಣವೇ ಮುಂದಾಗಬೇಕಿದೆ.