ಬೆಂಗಳೂರು: ನಗರದ ಬೆಳ್ಳಂದೂರು ಕೆರೆ ಸ್ವಚ್ಛತೆಯ ಕುರಿತು ಹೈಕೋರ್ಟ್ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದೆ.
ಬೆಳ್ಳಂದೂರು ಕೆರೆ ತ್ಯಾಜ್ಯ ನಿರ್ವಹಣೆಯ ಕುರಿತು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಯವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ನ ವಿಭಾಗೀಯ ಪೀಠದಲ್ಲಿ ನಡೆಯಿತು. ವಿಚಾರಣೆ ವೇಳೆ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಆಯುಕ್ತರಾದ ಮಹೇಂದ್ರ ಕುಮಾರ್ ಜೈನ್ ಹಾಗೂ ಬಿಡಿಎ ಆಯುಕ್ತರಾದ ರಾಕೇಶ್ ಸಿಂಗ್ ಹಾಜರಾಗಿದ್ದರು.
Advertisement
ನ್ಯಾಯಮೂರ್ತಿಗಳಾದ ಎಚ್.ಜಿ.ರಮೇಶ್, ಬೆಳ್ಳಂದೂರು ಕೆರೆ ತ್ಯಾಜ್ಯ ನಿರ್ವಹಣೆ ಏನು ಕ್ರಮ ತೆಗೆದುಕೊಂಡಿದ್ದೀರಾ? ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ತಜ್ಞರ ನೇಮಕಕ್ಕೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದೀರಿ, ಸರ್ಕಾರಕ್ಕೆ ಇಂದಿರಾ ಕ್ಯಾಂಟೀನ್ ಮೇಲಿರುವ ಕಾಳಜಿ ಕರೆಗಳ ಮೇಲಿಲ್ಲವೇ? ಕೆರೆ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆಗೆ ಜಾಹೀರಾತು ನೀಡಿದ್ದೀರಾ ಎಂದು ಪ್ರಶ್ನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Advertisement
Advertisement
ಈ ಪ್ರಶ್ನೆಗೆ ಮಹೇಂದ್ರ ಕುಮಾರ್ ಜೈನ್ ಬೆಳ್ಳಂದೂರು ಕೆರೆ ಸ್ವಚ್ಛತೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಐಐಟಿಯ ತಜ್ಞರು, ಪ್ರೊಫೆಸರ್ ಗಳು ಸೇರಿದ್ದಾರೆ. ಸಾಕಷ್ಟು ಒತ್ತುವರಿಯನ್ನು ತೆರವುಗಳಿಸಲಾಗಿದ್ದು ತ್ಯಾಜ್ಯ ನೀರನ್ನು ತಡೆಯಲಾಗಿದೆ. ಕೆರೆಗೆ ಕಾಂಪೌಂಡ್ ಸಹ ಹಾಕಿ, ತ್ಯಾಜ್ಯ ಹಾಕದಂತೆ ತಡೆಯಲು ಗಾರ್ಡ್‍ಗಳನ್ನು ಸಹ ನೇಮಿಸಲಾಗಿದೆ. 2020 ರ ವೇಳೆ ಬೆಳ್ಳಂದೂರು ಕೆರೆ ಸಂಪೂರ್ಣವಾಗಿ ಸರಿಹೋಗುತ್ತದೆ ಎಂದು ಉತ್ತರಿಸಿದರು.
Advertisement
ಈ ವೇಳೆ ಮಧ್ಯಪ್ರವೇಶಿಸಿದ ಹೈಕೋರ್ಟ್, ಬೆಂಗಳೂರು ಸಿಲಿಕಾನ್ ಸಿಟಿ ಆಫ್ ದಿ ವಲ್ರ್ಡ್ ಹಾಗೂ ಐಐಟಿ ಸೇರಿದಂತೆ ಅನೇಕ ತಂತ್ರಜ್ಞಾನ ಸಂಶೋಧನೆ ಕೇಂದ್ರಗಳಿವೆ. ಇವುಗಳನ್ನು ನೀವು ಬಳಸಿಕೊಂಡಿಲ್ಲ ಯಾಕೆ? ಬೆಂಗಳೂರು ಗ್ಲೋಬಲ್ ಲೀಡರ್ ಆಗಿದ್ದು, ಕೆಟ್ಟ ಸುದ್ದಿಗಳಿಗೆ ಸುದ್ದಿಯಾಗಿದೆ. ಕಸ ವಿಲೇವಾರಿ, ಕೆರೆಗಳಲ್ಲಿ ಬೆಂಕಿಯಿಂದ ವಿಶ್ವದೆಲ್ಲೆಡೆ ಸುದ್ದಿಯಾಗಿದೆ. ನಾರ್ವೆಯಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ, ಸ್ಯಾನಿಟರಿ ನೀರನ್ನು ಶುದ್ಧ ಮಾಡಿ ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ. ಆದರೆ ನಮ್ಮ ಬೆಂಗಳೂರಿನಲ್ಲಿ ಕಾಲುವೆಗಳ ಬಳಿ ನಿಲ್ಲಲು ಸಾಧ್ಯವಿಲ್ಲ, ಸರ್ಕಾರ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲು ಚಿಂತಿಸಿದೆಯೇ ಎಂದು ಹೈಕೋರ್ಟ್ ಸರ್ಕಾರವನ್ನು ಪುನಃ ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಆಯುಕ್ತರು ನಗರದ ನಾಲ್ಕು ಭಾಗಳಲ್ಲಿ ವಿದ್ಯುತ್ ತಯಾರಿಸಲು ಮುಂದಾಗಿದ್ದೇವೆ, ಬೆಳ್ಳಂದೂರು ಕೆರೆ ಶುದ್ದಿಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದರು.
ವಾದವನ್ನು ಆಲಿಸಿದ ಹೈಕೋರ್ಟ್ ಬೆಳ್ಳಂದೂರು ಕೆರೆಯ ಸ್ವಚ್ಛತೆಯ ಕುರಿತು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿತು. ಇದರಲ್ಲಿ ಮೊದಲು ಸಮಿತಿ ಸಭೆಯಲ್ಲಿ ತಜ್ಞರ ಸಲಹೆ ಸೂಚನೆಗಳನ್ನು ಪರಿಗಣಿಸಿ ಕ್ರಿಯಾಯೋಜನೆ ಸಿದ್ದಪಡಿಸಬೇಕು, ಸಮನ್ವತೆಯಿಂದ ಸಮಯ ವ್ಯರ್ಥ ಮಾಡದಂತೆ ಕೆಲಸ ಮುಂದುವರಿಸಿಕೊಂಡು ಹೋಗಬೇಕು. ಕೆರೆ ಸ್ವಚ್ಛತೆಗೆ ಗುತ್ತಿಗೆ ನೀಡಬೇಕು, ಅನಗತ್ಯವಾಗಿ ಹಣ ಖರ್ಚಾಗದಂತೆ ನಿಗಾ ವಹಿಸಬೇಕು. ಮುಂದಿನ ವಿಚಾರಣೆ ದಿನದೊಳಗೆ ಕಾಮಗಾರಿ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿ ಸೆಪ್ಟೆಂಬರ್ 18ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.