ರಾಯಚೂರು: ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಜಿಲ್ಲೆಯ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚಿಸುವ ಬದಲು ಮೊಬೈಲ್ ನಲ್ಲೇ ಮುಳುಗಿ ಹೋಗಿದ್ದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದರೆ, ಇನ್ನೂ ಕೆಲವರು ಕರೆ ಮಾಡಿ ಮಾತನಾಡುತ್ತಾ ಕುಳಿತ್ತಿದ್ದರು. ಜಿಲ್ಲೆಯಲ್ಲಿನ ಆರ್‍ಓ ಪ್ಲಾಂಟ್, ಕುಡಿಯುವ ನೀರು, ಗ್ರಾಮೀಣ ರಸ್ತೆ, ಕೆರೆ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಉಳಿದ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲವೇನೋ ಎನ್ನುವ ಹಾಗೆ ಮೊಬೈಲ್ ನೋಡುವುದರಲ್ಲಿ ನಿರತರಾಗಿದ್ದರು.
ಪ್ರತಿ ಬಾರಿಯೂ ಕೆಡಿಪಿ ಸಭೆಯಲ್ಲಿ ಇದೇ ಮರುಕಳಿಸುತ್ತಿದ್ದು, ಅಧಿಕಾರಿಗಳು ಮೊಬೈಲ್ ಇಲ್ಲದೆ ಸುಮ್ಮನೆ ಕೂರುವುದೇ ಇಲ್ಲ. ಅಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಶ್ನೆಗಳಿಗೆ ಅಸಮರ್ಪಕ ಉತ್ತರಗಳನ್ನು ನೀಡುವ ಅಧಿಕಾರಿಗಳು ತಮ್ಮ ಸರದಿ ಮುಗಿದ ಕೂಡಲೇ ಮೊಬೈಲ್ ಕಡೆವಾಲುತ್ತಿದ್ದಾರೆ. ಈ ಹಿಂದೆ ಹಲವಾರು ಬಾರಿ ಮೊಬೈಲ್ ಬಳಸದಂತೆ ಎಚ್ಚರಿಕೆ ನೀಡಿದ್ದರು ಅಧಿಕಾರಿಗಳು ತಮ್ಮ ಚಾಳಿಯನ್ನ ಮುಂದುವರಿಸಿದ್ದಾರೆ.