Connect with us

Bengaluru City

ರಾಜ್ಯ ಹೆದ್ದಾರಿಗೂ ಇನ್ಮುಂದೆ ಟೋಲ್ ಕಟ್ಟಬೇಕು!- 1 ಕಿ.ಮೀಗೆ ಎಷ್ಟು ರೂ. ಟೋಲ್?

Published

on

ಬೆಂಗಳೂರು: ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಟೋಲ್ ಶುಲ್ಕ ಪಾವತಿ ಮಾಡಬೇಕಿತ್ತು. ಆದರೆ ಇನ್ನುಮುಂದೆ ರಾಜ್ಯ ಹೆದ್ದಾರಿಗೂ ಟೋಲ್ ವಿಧಿಸುವ ಮೂಲಕ, ರಾಜ್ಯ ಸರ್ಕಾರ ಹೊಸ ಆದಾಯದ ಮೂಲವನ್ನು ಹುಡುಕಿಕೊಳ್ಳಲು ಮುಂದಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಬಿಓಟಿ (ಬಿಲ್ಡ್- ಆಪರೇಟ್- ಟ್ರಾನ್ಸ್‌ಫರ್‌) ಆಧಾರದಲ್ಲಿ ಹೆದ್ದಾರಿ ಅಭಿವೃದ್ಧಿ ಪಡಿಸಿರುವುದರಿಂದ ಟೋಲ್ ಸಂಗ್ರಹ ಅನಿವಾರ್ಯವಾಗಿದೆ. ಹೀಗಾಗಿ ಪ್ರತಿ ವರ್ಷ ಶೇ.10 ರಷ್ಟು ಟೋಲ್ ಶುಲ್ಕ ಹೆಚ್ಚಳ ಮಾಡಬೇಕು ಎನ್ನುವ ವಿಚಾರ ಪ್ರಸ್ತಾಪ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.  ಇದನ್ನು ಓದಿ: ಫಸ್ಟ್ ಟೈಂ ರಾಜ್ಯ ಹೆದ್ದಾರಿಗೂ ಟೋಲ್- ಸಮ್ಮಿಶ್ರ ಸರ್ಕಾರದ ಪ್ರಯೋಗಕ್ಕೆ ಜನಾಕ್ರೋಶ

ರಾಜ್ಯ ಹೆದ್ದಾರಿಗಳಿಗೆ ಟೋಲ್ ವಿಧಿಸಲು 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಿರ್ಧಾರ ಆಗಿದೆ. ಈ ನಿಟ್ಟಿನಲ್ಲಿ 17 ಟೆಂಡರ್ ಕರೆಯಲಾಗಿದ್ದು, ಅದರಲ್ಲಿ 5 ಟೆಂಡರ್ ನೀಡಲಾಗಿದೆ. ಮೊದಲ ವರ್ಷ ಶೇ.10, ಎರಡನೇ ವರ್ಷ ಶೇ.20 ಹಾಗೂ ಮೂರನೇ ಅವಧಿಗೆ ಶೇ.30 ದರ ಹೆಚ್ಚಳವಾಗಲಿದೆ. 2015ರಲ್ಲಿ ಟೋಲ್ ಸಂಗ್ರಹಕ್ಕೆ ನಿಯಮಾವಳಿ ರಚಿಸಲಾಗಿದ್ದು, 2017ರಲ್ಲಿಯೇ ಟೆಂಡರ್ ಕರೆಯಲಾಗಿತ್ತು ಎಂದ ಸಚಿವರು, ವಿಶ್ವ ಬ್ಯಾಂಕ್ ಮತ್ತು ಎಡಿಬಿ ಬ್ಯಾಂಕ್ ಅನುದಾನ ಅಡಿಯಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಎಲ್ಲೆಲ್ಲಿ ಟೋಲ್ ಸಂಗ್ರಹ:
ಈಗಾಗಲೇ ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಎರಡು ದಿನಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೊಸಕೋಟೆ – ಚಿಂತಾಮಣಿ- 58, ತುಮಕೂರು-ಪಾವಗಡ, ಮುದುಗಲ್-ತಾವರೆಗೇರಾ ರಾಜ್ಯ ಹೆದ್ದಾರಿ ಟೋಲ್ ಸಂಗ್ರಹಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಬಾಕಿ ಇರುವ ಬೇರೆ ಬೇರೆ ಮಾರ್ಗಗಳಲ್ಲಿ ಯೋಜನೆ ಅನುಷ್ಠಾನ ಹಂತದಲ್ಲಿದೆ. ಕೋಟಲ್ ಸಂಗ್ರಹಕ್ಕೆ ಕೆಶಿಪ್ ಮತ್ತು ಕೆಆರ್ ಡಿಸಿಎಲ್ ಸಂಸ್ಥೆಗಳು ಕಾಮಗಾರಿ ನಡೆಸಿವೆ. 3 ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.

ಕಿಮೀಗೆ ಎಷ್ಟು?
ಪ್ರಸ್ತಾವಿತ 17 ರಾಜ್ಯ ಹೆದ್ದಾರಿಗಳಲ್ಲಿ ಕಾರ್, ಜೀಪ್, ವ್ಯಾನ್ ಮತ್ತಿತರ ಲಘು ಮೋಟಾರು ವಾಹನಗಳಿಗೆ ಪ್ರತಿ ಕಿಮೀಗೆ 58 ಪೈಸೆ, ಕಡಿಮೆ ಭಾರ ಹೊರುವ ಭಾರೀ ವಾಹನಗಳಿಗೆ 86 ಪೈಸೆ, ಬಸ್ ಮತ್ತು ಟ್ರಕ್‍ಗೆ 1.73 ರೂ., ನಿಗದಿಪಡಿಸಲಾಗಿದೆ. ಮಲ್ಟಿ ಎಕ್ಸೆಲ್, ಅರ್ಥ್ ಮೂವಿಂಗ್ ಮಷಿನರಿ ಮತ್ತು 3ರಿಂದ 6 ಎಕ್ಸೆಲ್ ವಾಹನಗಳಿಗೆ 2.57 ರೂ. ಹಾಗೂ ಭಾರೀ ವಾಹನ ಮತ್ತು ಸೆವೆನ್ ಎಕ್ಸಲ್ ಗಿಂತ ಅಧಿಕ ಭಾರದ ವಾಹನಗಳಿಗೆ 3.45 ರೂ.ದಂತೆ ಶುಲ್ಕ ಸಂಗ್ರಹಿಸಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *