ನವದೆಹಲಿ: ಪಂಚರಾಜ್ಯಗಳ ಸೋಲಿನ ಬಳಿಕ ಎಚ್ಚೆತ್ತಿರುವ ಕೇಂದ್ರ ಸರ್ಕಾರ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಚಿಂತಿಸಿದೆ.
ರೈತರ ಸಾಲದ ವಿಚಾರವನ್ನು ಕಡೆಗಣಿಸಿದರೆ ನಮಗೂ ಸಮಸ್ಯೆಯಾಗಬಹುದು ಎನ್ನುವುದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೂ ಮುನ್ನ ಸಾಲಮನ್ನಾ ಘೋಷಣೆಯನ್ನು ಮಾಡುವ ಸಾಧ್ಯತೆಯಿದೆ.
Advertisement
ಒಂದೊಮ್ಮೆ ಸರ್ಕಾರದಿಂದ ಈ ನಿರ್ಧಾರ ಹೊರ ಬಿದ್ದರೆ 26 ಕೋಟಿ ರೈತರ ಸುಮಾರು 4.5 ಲಕ್ಷ ಕೋಟಿ ರೂಪಾಯಿ ಸಾಲಮನ್ನಾವಾಗುವ ಸಾಧ್ಯತೆಯಿದೆ. ಈ ಹಿಂದೆ 2008ರಲ್ಲಿ ಯುಪಿಎ ಸರ್ಕಾರ ರೈತರ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಏರಿತ್ತು. ಈಗ ಅದೇ ತಂತ್ರವನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಲಿದೆ ಎನ್ನಲಾಗಿದೆ.
Advertisement
Advertisement
ಬಿಜೆಪಿ ಸೋತ ಪ್ರಮುಖ ಮೂರು ರಾಜ್ಯಗಳು ಕೂಡ ರೈತರ ಹೋರಾಟಗಳು ಹೆಚ್ಚು ನಡೆದ ರಾಜ್ಯಗಳಾಗಿವೆ. ನಗರದ ಜನತೆ ಕೈ ಹಿಡಿದರೂ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತಿರುವುದು ಪ್ರತಿ ಚುನಾವಣೆಯಲ್ಲಿ ಸಾಬೀತಾಗುತ್ತಲೇ ಇದೆ. ಹೀಗಾಗಿ ಗ್ರಾಮೀಣ ಜನರನ್ನು ಸೆಳೆಯಲು ಸಾಲಮನ್ನಾ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.
Advertisement
ಶೀಘ್ರವೇ ಈ ಕುರಿತು ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಮಾರ್ಚ್ ಮೊದಲೇ ಈ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಸಾಲ ಮನ್ನಾವನ್ನು ಹೇಗೆ ಜಾರಿ ಮಾಡಬೇಕು ಎಂಬುವುದರ ಕುರಿತು ಆರ್ಥಿಕ ತಜ್ಞರಿಂದ ಕೇಂದ್ರ ಸರ್ಕಾರ ಮಾಹಿತಿ ಪಡೆಯಲಿದೆ.
ಈಗಾಗಲೇ ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡಲಾಗುವುದು ಎನ್ನುವ ಆಶ್ವಾಸನೆ ನೀಡಿದೆ. ರೈತರ ಸಾಲಮನ್ನಾ ಮಾಡಿದರೆ ಸಾಲಮನ್ನಾ ಹೆಸರಿನಲ್ಲಿ ಅಜೆಂಡಾ ರೂಪಿಸಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿರುವ ಯುಪಿಎ ಮೈತ್ರಿಕೂಟಕ್ಕೆ ಮೋದಿ ಶಾಕ್ ನೀಡಿದಂತಾಗುತ್ತದೆ. ಅಷ್ಟೇ ಅಲ್ಲದೇ ಸಾಲಮನ್ನಾ ಮತ್ತು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ರೈತರ ಮನವೊಲಿಕೆಯ ಕೆಲಸವೂ ಸುಲಭವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv