ಕಲಬುರಗಿ: ತಮ್ಮ ಅಮೂಲ್ಯವಾದ ಮತ ನೀಡಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನರ ಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕು. ಆದ್ರೆ ಕಲಬುರಗಿಯ ಚಿಂಚೋಳಿ ತಾಲೂಕಿನ ಸುಂಠಾಣ ಗ್ರಾಮದ ಜನರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆಂಬ ಒಂದೇ ಕಾರಣಕ್ಕೆ ಆ ಗ್ರಾಮಕ್ಕೆ ಸರ್ಕಾರಿ ಸೌಲಭ್ಯವನ್ನೇ ಕಡಿತಗೊಳಿಸಲಾಗಿದೆ.
ಅಧಿಕಾರಿಗಳು ತಪ್ಪು ಮತ ಲೆಕ್ಕ ನೀಡಿದ ಕಾರಣ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ ಕಾರಣಕ್ಕೆ ಸುಂಠಾಣಾ ಗ್ರಾಮಕ್ಕೆ ಈ ಸ್ಥಿತಿ ಬಂದೊದೊಗಿದೆ. ಮತ ಬಹಿಷ್ಕಾರ ಹಾಕಿದ್ದಕ್ಕೆ ಇಲ್ಲಿನ ರಾಜಕಾರಣಿಗಳು ಈ ಗ್ರಾಮದ ಮೇಲೆ ಸೇಡು ತೀರಿಸಿಕೊಳ್ಳಲು ನಿಂತಂತಿದೆ. ಪರಿಣಾಮ ಆ ಊರಿಗೆ ಸರ್ಕಾರಿ ಯೋಜನೆಗಳೇ ತಲುಪುತ್ತಿಲ್ಲ.
Advertisement
Advertisement
ರೈತರ ಜಮೀನುಗಳಿಗೆ ತಲಪಲು ನರೇಗಾ ಯೋಜನೆಯಡಿ ರಾಜ್ಯ ಸರ್ಕಾರ “ನಮ್ಮ ಹೊಲ ನಮ್ಮ ರಸ್ತೆ” ಯೋಜನೆ ಜಾರಿಗೆ ತಂದಿದೆ. ಗುಡ್ಡಗಾಡು ಪ್ರದೇಶದಲ್ಲಿರುವ ಸುಂಠಾಣ ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ರೈತರು ವ್ಯವಸಾಯ ಮಾಡುತ್ತಾರೆ. ಆದ್ರೆ ಯೋಜನೆ ಜಾರಿಯಾಗದ ಕಾರಣ ತಮ್ಮ ಜಮೀನುಗಳಿಗೆ ಗೊಬ್ಬರ ಒಯ್ಯಲು ಮತ್ತು ರಾಶಿ ಮಾಡಿದ ಬೆಳೆ ತರಲು ಸುಂಠಾಣ ಗ್ರಾಮದ ರೈತರು ಇಂದಿಗೂ ಕತ್ತೆಗಳನ್ನು ಅವಲಂಬಿಸಿದ್ದಾರೆ.
Advertisement
Advertisement
ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಕಾರಣ ಈ ಗ್ರಾಮಕ್ಕೆ ಜನಪ್ರತಿನಿಧಿಗಳೂ ಇಲ್ಲ. ಗ್ರಾಮದ ಸಮಸ್ಯೆ ಹೇಳಲು ಕೋಡ್ಲಿ ಗ್ರಾಮ ಪಂಚಾಯತ್‍ನಲ್ಲಿ ಸದಸ್ಯರೂ ಇಲ್ಲದಂತಾಗಿದೆ. ಹೀಗಾಗಿ ಇತರೆ ಗ್ರಾಮಗಳ ಪಂಚಾಯ್ತಿ ಸದಸ್ಯರ ರಾಜಕೀಯದಿಂದ ಸುಂಠಾಣ ಗ್ರಾಮಕ್ಕೆ ಯಾವುದೇ ಸೌಕರ್ಯ ಸಿಗುತ್ತಿಲ್ಲ. ಈ ಬಗ್ಗೆ ಪಿಡಿಓ ಕೂಡ ತಲೆಕೆಡಿಸಿಕೊಂಡಂತೆ ಕಾಣ್ತಿಲ್ಲ.
ಪಬ್ಲಿಕ್ ಟಿವಿ ವರದಿ ನೋಡಿಯಾದ್ರೂ ಜಿಲ್ಲಾಧಿಕಾರಿಗಳು, ಸಿಎಂ ಸಂಸದೀಯ ಕಾರ್ಯದರ್ಶಿಯೂ ಆಗಿರೋ ಸ್ಥಳೀಯ ಶಾಸಕ ಉಮೇಶ್ ಜಾಧವ್, ಪಿಡಿಓ ಸೇರಿದಂತೆ ಇತರೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.