ಶಿವಮೊಗ್ಗ: ಅಧುನಿಕ ತಂತ್ರಜ್ಞಾನವನ್ನು ವಂಚನೆಗೆ ಬಳಸಿಕೊಳ್ಳುತ್ತಿರುವ ಮಹಾ ಮೋಸದ ಜಾಲ ಇದು. ಸರ್ಕಾರಿ ಅಧಿಕಾರಿಗಳೂ ಹಾಗೂ ಖಾಸಗಿ ವ್ಯಕ್ತಿಗಳು ಸೇರಿ ಮೀಟರ್ ಮೂಲಕ ಪ್ರತಿ ತಿಂಗಳು ರಾಜ್ಯದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದಾರೆ. ಮೋಸದ ಮೀಟರ್ ದಂಧೆಯ ಒಂದು ಸ್ಯಾಂಪಲ್ ಇಲ್ಲಿದೆ.
ಏಂ01 ಉ5787 ನಂಬರಿನ ಈ ಟಾಟಾ ಸುಮೋ ಗ್ರ್ಯಾಂಡ್ ಶಿವಮೊಗ್ಗದಲ್ಲಿರುವ ಅಬಕಾರಿ ಜಿಲ್ಲಾ ಅಧಿಕಾರಿಗೆ ಕೊಟ್ಟಿರುವ ಕಾರು. ಇದರಲ್ಲಿ ಇರುವ ಹೊಸ ತಂತ್ರಜ್ಞಾನ ನೋಡಿದ್ರೆ ನೀವು ಬೆಚ್ಚಿ ಬೀಳೋದು ಖಚಿತ. ಈ ಕಾರ್ ನಿಂತಲ್ಲೇ ನೂರಾ ಆರವತ್ತು ಕಿಲೋಮೀಟರ್ ವೇಗದಲ್ಲಿ ಓಡುತ್ತೆ. ನಿಂತಲ್ಲೇ ನೂರಾರು ಕಿಲೋಮೀಟರ್ ರೀಡಿಂಗ್ ತೋರಿಸುತ್ತೆ.
ಆಗಿರೋದು ಇಷ್ಟೇ. ಮುಂಚೆ ಚಾಲಕ ಆಗಿದ್ದಾತ ಇಲಾಖೆಗೆ ತಿಳಿಯದಂತೆ ಈ ಕಾರಿಗೆ ವಿಶೇಷ ಸಾಧನವೊಂದನ್ನು ಅಳವಡಿಸಿದ್ದಾನೆ. ಈತ ಎಲ್ಲಿಗೆ ಹೋಗಿ ಬಂದರೂ ಒಂದಷ್ಟು ಜಾಸ್ತಿ ಕಿಲೋಮೀಟರ್ ತೋರಿಸಿ ಹೆಚ್ಚು ಡೀಸೆಲ್ ಹಾಕಿಸಿದ ಲೆಕ್ಕ ತೋರಿಸಿ ಹಣ ಹೊಡೆಯುತ್ತಿದ್ದ. ಇದು ಅಬಕಾರಿ ಜಿಲ್ಲಾ ಅಧಿಕಾರಿ ಸಂಚರಿಸುವ ಕಾರು. ಅವರಿಗೆ ಗೊತ್ತಿಲ್ಲದೆ ಈ ಕೃತ್ಯ ನಡೆಯಲು ಸಾಧ್ಯವಿಲ್ಲ. ಸರ್ಕಾರಿ ವಾಹನಕ್ಕೆ ಈ ರೀತಿ ಹೆಚ್ಚುವರಿಯಾಗಿ ಮೋಟಾರ್ ಜೋಡಿಸುವುದು ತಪ್ಪು. ಆದರೂ ಇದುವರೆಗೂ ಈ ಕೃತ್ಯವೆಸಗಿರುವ ಚಾಲಕನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದು ಬೆಳಕಿಗೆ ಬಂದಿರುವ ಒಂದು ವಾಹನದ ವಿಷಯ. ಸರ್ಕಾರಿ ಇಲಾಖೆಗಳಿಗೆ ಬಾಡಿಗೆ ಬಿಟ್ಟಿರುವ ಖಾಸಗಿ ಟ್ರಾವೆಲ್ಸ್ ಕಾರುಗಳಲ್ಲೂ ಇಂಥ ಮೋಸದ ಮೀಟರ್ ದಂಧೆ ನಿತ್ಯವೂ ನಡೆಯುತ್ತಿದೆ. ನಿಂತಲ್ಲೇ ನೂರಾರು ಕಿ.ಮೀ. ತೋರಿಸಿ, ಡೀಸೆಲ್, ಟಿಎ, ಡಿಎ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.