ಗದಗ: ಸರ್ಕಾರಿ ಬಸ್ ಪಲ್ಟಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು, 8 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಸಮೀಪದ ಕೊಡಗಾನೂರು ಬಳಿ ನಡೆದಿದೆ.
ನಾಗವ್ವ ಅಳವಂಡಿ (50) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡ 8 ಮಂದಿಯನ್ನು ಸ್ಥಳೀಯ ಗಜೇಂದ್ರಗಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು 30 ಪ್ರಯಾಣಿಕರಿದ್ದ ಬಸ್ ಗಜೇಂದ್ರಗಡದಿಂದ ಇಂದು ಬೆಳಗ್ಗೆ ಸುಮಾರು 7 ಗಂಟೆಗೆ ಗದಗಕ್ಕೆ ತೆರಳುತ್ತಿತ್ತು. ಬಸ್ ಕೊಡಗಾನೂರು ಬಳಿ ಬರುತ್ತಿದ್ದಂತೆ ಚಾಲಕನ ಅಜಾಗರುಕತೆಯಿಂದ ಬಸ್ ರಸ್ತೆ ಪಕ್ಕಕ್ಕೆ ಪಲ್ಟಿ ಹೊಡೆದಿದೆ. ಪರಿಣಾಮ ನಾಗವ್ವ ಎಂಬವರಿಗೆ ಗಂಭೀರ ಗಾಯವಾಗಿದ್ದು, ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಸೂಕ್ತ ಸಮಯಕ್ಕೆ ಬಾರದ ಕಾರಣ ಇನ್ನೊಂದು ಸರ್ಕಾರಿ ಬಸ್‍ನಲ್ಲಿಯೇ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ನಾಗವ್ವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.
ಈ ಅಪಘಾತ ಗಜೇಂದ್ರಗಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ. ಮೃತರ ಹಾಗೂ ಗಾಯಾಳು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.