– ಇಂಡಿಗೋದ ಆಂತರಿಕ ರೋಸ್ಟರಿಂಗ್ ಅಡಚಣೆಗಳೇ ಕಾರಣ
ನವದೆಹಲಿ: ಕಳೆದ ಎಂಟು ದಿನಗಳಿಂದ ಉಂಟಾಗುತ್ತಿರುವ ವಿಮಾನಗಳ ಹಾರಾಟ ರದ್ದು ಹಾಗೂ ಸಂಚಾರ ವ್ಯತ್ಯಯ ಸಮಸ್ಯೆಗೆ ಇಂಡಿಗೋದ (Indigo) ಆಂತರಿಕ ರೋಸ್ಟರಿಂಗ್ ಅಡಚಣೆಗಳೇ ಕಾರಣ. ಯಾವ ವಿಮಾನಯಾನ ಸಂಸ್ಥೆಯೂ ಕಾನೂನಿಗಿಂತ ದೊಡ್ಡದಲ್ಲ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು (Minister Ram Mohan Naidu) ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆಯಲ್ಲಿ (Loksabha) ಮಾತನಾಡಿದ ಅವರು, ಯಾವ ವಿಮಾನಯಾನ ಸಂಸ್ಥೆಯೂ ಕಾನೂನಿಗಿಂತ ದೊಡ್ಡದಲ್ಲ ಯೋಜನಾ ವೈಫಲ್ಯ ಹಾಗೂ ಶಾಸನಬದ್ಧ ನಿಬಂಧನೆಗಳನ್ನು ಪಾಲಿಸದೇ ಪ್ರಯಾಣಿಕರಿಗೆ ತೊಂದರೆ ಕೊಡುವಂತಿಲ್ಲ. ವಿಮಾನಗಳ ರದ್ಧತಿಯಿಂದಾಗಿ ಪ್ರಯಾಣಿಕರಿಗೆ ಉಂಟಾದ ಸಮಸ್ಯೆಗೆ ಇಂಡಿಗೋ ಸಂಸ್ಥೆಯೇ ಹೊಣೆ. ಈಗಾಗಲೇ ಈ ಸಂಬಂಧ ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಇಓಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇನ್ನೂ ಈ ಕುರಿತು ತನಿಖೆ ಆರಂಭಿಸಲಾಗಿದ್ದು, ತನಿಖಾ ವರದಿ ಆಧಾರದ ಮೇಲೆ ವಿಮಾನಯಾನ ನಿಯಮಗಳು ಹಾಗೂ ಕಾಯ್ದೆಯಡಿಯಲ್ಲಿ ಕಠಿಣ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ದೇಶದಲ್ಲಿ ಹೊಸ ವಿಮಾನಯಾನ ಕಂಪನಿ ಆರಂಭಿಸಲು ಬೆಸ್ಟ್ ಟೈಂ : ರಾಮ್ ಮೋಹನ್ ನಾಯ್ಡು
ಹೆಚ್ಚುತ್ತಿರುವ ಬಿಕ್ಕಟ್ಟಿನ ನಡುವೆ ಇಂಡಿಗೋಗೆ ವಿಮಾನಗಳನ್ನು ಶೇ.5 ರಷ್ಟು ಕಡಿಮೆ ಮಾಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಚನೆ ನೀಡಿದೆ. ಇದಲ್ಲದೆ ಸರ್ಕಾರವು ಸೋಮವಾರ ಸಂಜೆ 5 ಗಂಟೆಯೊಳಗೆ ಪರಿಷ್ಕೃತ ವೇಳಾಪಟ್ಟಿ ನೀಡುವಂತೆ ವಿಮಾನಯಾನ ಸಂಸ್ಥೆಗೆ ತಿಳಿಸಿದೆ.

