ಬೆಂಗಳೂರು: ಗಣಿಗಾರಿಕೆ ಮಾಡಲು ಸರ್ಕಾರದ ಸಂಸ್ಥೆಯ ಜೊತೆ ಸಹಿ ಹಾಕಲಾಗಿದೆ. ಅವರು ಕಿಕ್‌ಬ್ಯಾಕ್ (Kickback) ನೀಡುವುದಿಲ್ಲ ಎಂದು ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ (CT Ravi) ಹೇಳಿದ್ದಾರೆ.
ಬಳ್ಳಾರಿಯ ದೇವದಾರಿ ಬೆಟ್ಟದಲ್ಲಿ (Devadari Forest) ಗಣಿಗಾರಿಕೆಗೆ ಕೇಂದ್ರ ಸರ್ಕಾರದ ಅನುಮತಿ ಬೆನ್ನಲ್ಲೇ ರಾಜ್ಯ ಸರ್ಕಾರ ತಡೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು.
ಖಾಸಗಿ ಅವರಿಗೆ ಕೊಡುವ ಆಸಕ್ತಿ, ಸರ್ಕಾರಿ ಸಂಸ್ಥೆಗೆ ಕೊಡುವ ಆಸಕ್ತಿ ಯಾಕಿಲ್ಲ? ಜಿಂದಾಲ್ ಕನ್ನಡಿಗರಿಗೇ ಉದ್ಯೋಗ ನೀಡುತ್ತೇವೆ ಎಂದರು. ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ? ತಡೆ ಹಿಡಿದಿರುವುದು ನೋಡಿದರೆ ಇವರು ಸೂಟ್‌ಕೇಸ್ ಕೊಡಲಿ ಎಂಬ ಕಾರಣ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಪಾಪ ಪುಣ್ಯ ನಮಗೆ ಗೊತ್ತಿಲ್ಲ. ಅದು ಅಂತರಾತ್ಮ ಹಾಗೂ ಪರಮಾತ್ಮನಿಗೆ ಮಾತ್ರವೇ ಗೊತ್ತಿರುತ್ತದೆ. ನಾವು ಏನು ಹೇಳಲು ಬರುವುದಿಲ್ಲ. ಈ ನೆಲದ ಕಾನೂನು ಎಲ್ಲರಿಗೂ ಒಂದೇ. ಆದರೆ ಪಾಪ ಪುಣ್ಯದ ಪ್ರಶ್ನೆ ಬಂದರೆ ಅದು ನಮಗೆ ಸಂಬಂಧಪಡುವುದಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ಸಿಗುವುದಿಲ್ಲ ಎಂದರು. ಇದನ್ನೂ ಓದಿ: ತಲ್ವಾರ್ ಝಳಪಿಸಿ ಇನ್ಸ್ಟಾಗ್ರಾಮ್‍ನಲ್ಲಿ ಪೋಸ್ಟ್ – ಆರೋಪಿಗಳು ಅರೆಸ್ಟ್
ಬಿಜೆಪಿಯಿಂದ ಯಾವುದೇ ಆಪರೇಷನ್ ಮಾಡುವುದಿಲ್ಲ. ನಮ್ಮ ಬಳಿ ಸರ್ಕಾರ ಮಾಡುವಷ್ಟು ನಂಬರ್ ಕೂಡ ಇಲ್ಲ. ಸರ್ಕಾರ ಬಂದು 14 ತಿಂಗಳ ಅಧಿಕಾರ ನೋಡಿದ್ದೀರಿ. ಬಿಹಾರದಂತ ರಾಜ್ಯದಲ್ಲಿ ಕ್ರೈಮ್ ರೇಟ್ ಕಡಿಮೆ ಆಗುತ್ತಿದೆ. ಕರ್ನಾಟಕದಲ್ಲಿ ಕ್ರೈಮ್ ರೇಟ್ ಜಾಸ್ತಿ ಆಗುತ್ತಿದೆ ಎಂದು ಹೇಳಿದರು.
ಅಧಿಕಾರದಲ್ಲಿ ಇರುವವರು ನಾನೆಷ್ಟು ಲೂಟಿ ಮಾಡಲಿ ಅಂತ ಪೈಪೋಟಿಗೆ ಬಿದ್ದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮೊದಲ ಗತ್ತು ಕಾಣುತ್ತಿಲ್ಲ. ನಮ್ಮದೆಲ್ಲಾ ಮುಗಿಯಿತು. ಯಾರನ್ನು ಸೆಟಲ್ ಮಾಡಬೇಕು ಎಂಬ ಹಂತಕ್ಕೆ ಬಂದಿದ್ದಾರೆ ಎಂದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (KIOCL) ಕಡತಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಒಪ್ಪಿಗೆ ನೀಡಿ ಕಡತಕ್ಕೆ ಸಹಿ ಹಾಕಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ ಮಾಡಿದ್ದು, ಉದ್ದೇಶಿತ ಗಣಿ ಪ್ರದೇಶ ಸ್ವಾಮಿಮಲೈ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ. ಇಲ್ಲಿ ಗಣಿಗಾರಿಕೆಯಿಂದ 99,330 ಮರಗಳು ಕಡಿದು ನಾಶವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.