ಬಾಗಲಕೋಟೆ: ಕೈ ನಾಯಕರು ಹಲ್ಲಿಲ್ಲದ ಹಾವಿನ ರೀತಿ ಬುಸು ಬುಸು ಅನ್ಕೊಂಡು ಕೂತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
Advertisement
ಮೇಕೆದಾಟು ಪಾದಯಾತ್ರೆ ತಡೆಯಲು ಸರ್ಕಾರ ದುರ್ಬಲವಾಗಿದೆಯೇ ಎಂಬ ಹೈಕೋರ್ಟ್ ಪ್ರಶ್ನೆಮಾಡಿದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದೇನಿಲ್ಲ, ನಮ್ಮದು ದುರ್ಬಲ ಸರ್ಕಾರ ಅಲ್ಲ. ರೈತರಿಗಾಗಿ ಪಾದಯಾತ್ರೆ ಎಂದು ಅವರು ಗಿಮಿಕ್ ಮಾಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕಿಗಾಗಿ ಪಾದಯಾತ್ರೆ ಎಂಬ ಡೊಂಬರಾಟ ಸರಿಯಲ್ಲ ಇಂತಹ ಗಿಮಿಕ್ ಗಳನ್ನ ಬಿಡಬೇಕು. ಇಂತಹ ಗಿಮಿಕ್ ಗಳಿಂದ ದೇಶದಲ್ಲಿ 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ನವರಿಗೆ ಯಾವುದೇ ಲಾಭವಾಗಿಲ್ಲ ಹೀಗಾಗಿ ಇವತ್ತು ಸ್ಕ್ರಾಪ್ ಆಗಿದ್ದಾರೆ. ಹಲ್ಲಿಲ್ಲದ ಹಾವಿನ ರೀತಿ ಬುಸು ಬುಸು ಅನ್ಕೊಂಡು ಕೂತಿದ್ದು, ಅವರು ಇಂತಹ ನಾಟಕ ಬಿಡಬೇಕು. ಸರ್ಕಾರಕ್ಕೆ ಸಲಹೆ ಮಾಡಲಿ, ಸಹಕಾರ ಮಾಡಲಿ, ಯೋಜನೆ ಯಾವರೀತಿ ಮಾಡಬೇಕೆಂದು ಹೇಳಲಿ ಅದನ್ನ ನಾವು ಸ್ವಾಗತ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ
Advertisement
ಸರ್ಕಾರದಿಂದ ಪಾದಯಾತ್ರೆ ರದ್ದು ಆದೇಶ ವಿಚಾರವಾಗಿ ಮಾತನಾಡಿದ ಅವರು, ನಿಯಮಾವಳಿ ಮೀರಿ ಹೆಚ್ಚು ಜನ ಸೇರಿ ಕೋವಿಡ್ ಹರಡೋದಕ್ಕೆ ಕಾರಣ ಆಗುತ್ತಿದ್ದಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಈಗಾಗಲೇ ಕಾಂಗ್ರೆಸ್ ಶಾಸಕರಿಗೆ, ನಾಯಕರಿಗೆ ಕೋವಿಡ್ ಬಂದಿದೆ ಎಂದರು.
Advertisement
Advertisement
ಡಿಕೆಶಿ ಮಕ್ಕಳ ಜೊತೆ ಭೇಟಿ ಹಿನ್ನೆಲೆ ಹೇಳಿಕೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಹೋದ ಶಾಲೆಗಳಲ್ಲಿ ಮಕ್ಕಳಿಗೂ ಕೋವಿಡ್ ಬಂದಿದ್ದು, ಅಧಿಕಾರಿಗಳಿಗೂ ಸಹ ಕೋವಿಡ್ ಬಂದಿದೆ. ಅದಕ್ಕಾಗಿ ಜವಾಬ್ದಾರಿಯುತ ಪ್ರತಿಪಕ್ಷವಾಗಿದ್ದು, ಕಾಂಗ್ರೆಸ್ ನವರು ಪಾದಯಾತ್ರೆ ಮೊಟಕುಕೊಳಿಸೋದು ಒಳ್ಳೆಯದು ಎಂದರು.
ಪಾದಯಾತ್ರೆಯನ್ನು ಮಾಡುವುದೇ ಆದರೆ 50 ಜನ ಸೇರಿ ಸಾಂಕೇತಿಕವಾಗಿ ಮಾಡೋದಕ್ಕೆ ನಾವು ಯಾವತ್ತೂ ಬೇಡ ಅಂದಿಲ್ಲ. ನಮಗೆ ಹೋರಾಟ ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಜನರಿಗೆ ಯಾರು ಎಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನೋದು ಗೊತ್ತಿದೆ. ವೋಟ್ ಬ್ಯಾಂಕ್ ಕಾರಣಕ್ಕಾಗಿ ಕಾಂಗ್ರೆಸ್ ನೀರಾವರಿ ಹೋರಾಟ ಮಾಡುತ್ತಿದ್ದು, ಇದು ಯಾವತ್ತೂ ಒಳ್ಳೆಯದಲ್ಲ. 2013 ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಅಂತ ಪಾದಯಾತ್ರೆ ಮಾಡಿದರು. ನಂತರ ಅಧಿಕಾರಕ್ಕೆ ಬಂದು ಏನೂ ಮಾಡಿಲ್ಲ. ಜನರಿಗೆ ಇವರು ಮೋಸಗಾರರು ಅಂತ ಗೊತ್ತಾಗಿದೆ. ಅದಕ್ಕಾಗಿ ಕರ್ತವ್ಯಲೋಪ ಕೆಲಸ ಮಾಡಿ, ಭಂಡತನದಿಂದ ಹೋರಾಟ ಮಾಡುತ್ತೇನೆ ಅಂದರೆ ಜನ ಒಪ್ಪೋದಿಲ್ಲ. ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಜನರ ಜೀವ ರಕ್ಷಣೆಗಾಗಿ ಹೋರಾಟ ಮೊಟಕು ಗೊಳಿಸೋದು ಒಳ್ಳೆಯದು ಎಂದು ನುಡಿದರು. ಇದನ್ನೂ ಓದಿ: ಅನಿವಾರ್ಯತೆ ಬಂದ್ರೆ ಮೇಕೆದಾಟು ಪಾದಯಾತ್ರೆ ನಿಲ್ಲಿಸಿ: ಕೈ ಹೈಕಮಾಂಡ್ ಸೂಚನೆ
ಮೇಕೆದಾಟು ಪಾದಯಾತ್ರೆ ನಿಲ್ಲಲ್ಲ ಎಂದು ಸಂಸದ ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಹಾಗಾದ್ರೆ ಅವರಿಗೆ ದೇಶದ ಕಾನೂನಿನ ಬಗ್ಗೆ ಗೌರವ ಇಲ್ಲ. ಗೌರವ ಕೊಡಬೇಕಾದ ಜವಾಬ್ದಾರಿ ಯಾರದ್ದು? ಪ್ರತಿಪಕ್ಷದ ನಾಯಕರು ಅಷ್ಟೇ ಅಲ್ಲದೇ, ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿದ್ದಾರೆ, ಸಂಸದರಿದ್ದಾರೆ. ಆ ರೀತಿ ಮಾತನಾಡುವದು ಅವರಿಗೆ ಗೌರವ ತರಲ್ಲ. ದೇಶದ ಕಾನೂನನ್ನ ಗೌರವಿಸಬೇಕಾಗಿದ್ದು ದೇಶ 130 ಕೋಟಿ ಜನರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ತಿರುಗೇಟು ನೀಡಿದರು.
ಮೇಲಿಂದ ಮೇಲೆ ಕೋವಿಡ್ ಕೇಸ್ ಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಮತ್ತೆ ಲಾಕಡೌನ್ ಅನಿವಾರ್ಯವಾಗುತ್ತಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲ ಅದರ ಬಗ್ಗೆ ನಾನಿನ್ನೂ ತಿಳಿದುಕೊಂಡಿಲ್ಲ. ಸಿಎಂ ಬಸವರಾಜ ಬೊಮ್ಮಾಯಿಯವರ ಜೊತೆಗೂ ಮಾತಾಡಿಲ್ಲ. ತಜ್ಞರ ಜೊತೆ ಮಾತನಾಡಿದ ನಂತರ ಮಾತನಾಡುತ್ತೇನೆ. ಈ ನಾಡಿನ ಜನರ ಹಿತದೃಷ್ಟಿಯಿಂದ ಮೇಕೆದಾಟು ಹೋರಾಟ ಮೊಟಕುಗೊಳಿಸೋದು ಒಳ್ಳೆಯದು ಎಂದು ಹೇಳಿದರು.