ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ಮಂಡನೆ ಮಾಡಿದ್ದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸ್ಪೀಕರ್ ಅವರಿಗೆ ರಾಜ್ಯಪಾಲರು ಖಡಕ್ ಸಂದೇಶ ನೀಡಿದ್ದಾರೆ.
ಭೋಜನ ವಿರಾಮದ ವೇಳೆ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಸ್ಪೀಕರ್ ನಡೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರು ಅಧಿಕಾರಿಗಳಿಂದ ವರದಿ ಪಡೆದಿದ್ದರು. ವರದಿ ಪಡೆದ ಬಳಿಕ ಸ್ಪೀಕರ್ ಅವರಿಗೆ ಸೂಚನೆ ನೀಡಿರುವ ರಾಜ್ಯಪಾಲರು ಇಂದೇ ವಿಶ್ವಾಸಮತಯಾಚನೆಯನ್ನು ಮುಗಿಸಿ ಎಂದು ಸೂಚನೆ ನೀಡಿದ್ದಾರೆ. ರಾಜ್ಯಪಾಲರ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲಿ ಓದಿ ವಿವರಣೆ ನೀಡಿದ್ದು, ಸದನ ಸದಸ್ಯರ ಗಮನಕ್ಕೆ ತಂದಿದ್ದಾರೆ.
Advertisement
Advertisement
ಇತ್ತ ರಾಜ್ಯಪಾಲರ ಪತ್ರಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, ಇಂದು ಸದನದಲ್ಲಿ ವಿಶ್ವಾಸಮತ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಾನೂನಿನ ಗೊಂದಲಗಳು ಆರಂಭವಾಗಿದೆ. ಆದ್ದರಿಂದ ಇದನ್ನು ಅಷ್ಟು ಬೇಗ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಚರ್ಚೆ ನಡೆಯಬೇಕಿದೆ ಎಂದು ಸ್ಪೀಕರ್ ಅವರಿಗೆ ತಿಳಿಸಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಅವರು, ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಈ ಬಗ್ಗೆ ನಾನು ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಎಂದರು.
Advertisement
ಕಾಂಗ್ರೆಸ್ ಸದಸ್ಯರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಎಸ್ ಯಡಿಯೂರಪ್ಪ ಅವರು, ನಮಗೆ ಚರ್ಚೆ ನಡೆಸುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಚರ್ಚೆ ನಡೆಯಲಿ ಎಂದರು. ಆದರೆ ಇಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಲಿ. ಆಡಳಿತ ಪಕ್ಷದ ಎಲ್ಲಾ ನಾಯಕರಿಗೆ ಮಾತನಾಡಲು ಅವಕಾಶ ನೀಡಿ, ನಮಗೆ ಕೇವಲ 5 ನಿಮಿಷ ಅವಕಾಶ ನೀಡಿದರೆ ಸಾಕು ಒಬ್ಬರೋ ಇಬ್ಬರೋ ಮಾತನಾಡುತ್ತಾರೆ ಎಂದು ತಿಳಿಸಿದರು.
Advertisement
ಈ ವೇಳೆ ಕೃಷ್ಣಬೈರೇಗೌಡರು ಮಾತನಾಡಿ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಸದಸ್ಯರು ಹಿಂದಿನ ಬಾಗಿಲಿನಿಂದ ಹೋಗಿ ರಾಜ್ಯಪಾಲರ ಮೂಲಕ ಸೂಚನೆ ತರುವುದಿಲ್ಲ ಸರಿಯಲ್ಲ. ಇಲ್ಲೇ ಚರ್ಚೆ ಮಾಡಬಹುದು ಎಂದಾಗ ಈಶ್ವರಪ್ಪ ಇಡಿ ರಾಜ್ಯದ ಜನತೆ ನೋಡುತ್ತಿದ್ದಾರೆ. ಹೀಗಾಗಿ ನಾವು ರಾಜ್ಯಪಾಲರಲ್ಲಿ ಹೋಗಿ ದೂರು ನೀಡಿದ್ದೇವೆ ಎಂದರು. ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ಇಲ್ಲಿ ಅನಾವಶ್ಯಕವಾಗಿ ರಾಜ್ಯಪಾಲರನ್ನು ಎಳೆ ತರುವುದು ಬೇಡ. ನಾವು ಹೋಗಿ ಮನವಿ ನೀಡಿದ್ದೇವೆ ಎಂದು ಬಿಜೆಪಿ ಸದಸ್ಯರೇ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಹೋಗದೇ ರಾಜ್ಯಪಾಲರು ಸೂಚನೆ ನೀಡಿದ್ದರೆ ಆಗ ಪ್ರಶ್ನಿಸಬಹುದಿತ್ತು. ದಯವಿಟ್ಟು ರಾಜ್ಯಪಾಲರನ್ನು ಈ ಚರ್ಚೆಗೆ ಎಳೆದು ತರಬೇಡಿ ಎಂದು ಮನವಿ ಮಾಡಿದರು.