ಬೆಂಗಳೂರು: ಕೊನೆಗೂ ಮೈಕ್ರೋಫೈನಾನ್ಸ್ (Microfinance) ಕಿರುಕುಳ ತಡೆಯುವ ಸುಗ್ರೀವಾಜ್ಞೆಗೆ (Ordinance) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಸರ್ಕಾರವು ರಾಜ್ಯಪಾಲರು ಎತ್ತಿದ್ದ ಎಲ್ಲ ಆಕ್ಷೇಪಣೆಗಳಿಗೆ ಸವಿವರಗಳೊಂದಿಗೆ ಸ್ಪಷ್ಟೀಕರಣ ಕೊಟ್ಟು ಸುಗ್ರೀವಾಜ್ಞೆ ಕರಡನ್ನು ಮತ್ತೆ ರಾಜಭವನಕ್ಕೆ ಕಳಿಸಿತ್ತು. ಇಂದು ರಾಜ್ಯಪಾಲರು ಸರ್ಕಾರಕ್ಕೆ ಕೆಲ ಸಲಹೆ-ಸೂಚನೆ ನೀಡಿ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.
ಅಧಿವೇಶನದಲ್ಲಿ ಮಸೂದೆ ಮಂಡಿಸುವಾಗ ಕೆಲ ಅಂಶಗಳನ್ನು ಸೇರ್ಪಡೆ ಮಾಡುವಂತೆ ಮತ್ತು ಕೆಲ ಅಂಶ ತೆಗೆಯುವಂತೆ ರಾಜ್ಯಪಾಲರಿಂದ ಸೂಚನೆ ಬಂದಿದೆ. ಒಟ್ಟಾರೆಯಾಗಿ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಡವರಿಗೆ ದುಡಿಯುವ ವರ್ಗಕ್ಕೆ ಅನಧಿಕೃತ, ಕಾನೂನು ಬಾಹಿರ ಮೈಕ್ರೋಫೈನಾನ್ಸ್ ಕಿರುಕುಳ ತಪ್ಪಿಸಲು ಸರ್ಕಾರ ಮುಂದಾಗಿರುವ ಕ್ರಮ ಸ್ವಾಗತಾರ್ಹ ಅಂದಿದ್ದಾರೆ.
ಇನ್ನು ಇಂದೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯನ್ನು ಸರ್ಕಾರದ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆ ಮಾಡಿದ ತತಕ್ಷಣದಿಂದ ಹೊಸ ಕಾನೂನು ಜಾರಿ ಆಗಲಿದೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು ನೀಡಿದ ಖರ್ಗೆ
ರಾಜ್ಯಪಾಲರು ನೀಡಿದ ಸೂಚನೆಗಳೇನು?
ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಸಮಯದಲ್ಲಿ, ರಾಜ್ಯ ಸರ್ಕಾರವು ಕೆಲವು ಅಗತ್ಯ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು.
ಸುಗ್ರೀವಾಜ್ಞೆಯು ಉತ್ತಮ ಉದ್ದೇಶಗಳನ್ನು ಹೊಂದಿದ್ದರೂ ಸಹ, ಸುಗ್ರೀವಾಜ್ಞೆಯ ಕಾನೂನು ಮತ್ತು ಸಾಮಾಜಿಕ ಪರಿಣಾಮವನ್ನು ಎರಡೂ ಸದನಗಳಲ್ಲೂ ವಿವರವಾಗಿ ಚರ್ಚಿಸಬೇಕಾಗಿದೆ.
ಕಾನೂನಾತ್ಮಕ, ಅಧಿಕೃತ, ನೊಂದಾಯಿತ, ನಿಯಂತ್ರಿತ ಸಂಸ್ಥೆಗಳು, ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಬ್ಯಾಂಕುಗಳ ವ್ಯವಹಾರ ಶಾಖೆಗಳು), ಆರ್‌ಬಿಐ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ವಸತಿ ಹಣಕಾಸು ನಿಗಮಗಳು ಈ ಕಾನೂನಿನ ತಪ್ಪು ವ್ಯಾಖ್ಯಾನ ಅಥವಾ ದುರುಪಯೋಗದಿಂದ ಕಿರುಕುಳಕ್ಕೊಳಗಾಗಬಾರದು.
ಈಗಾಗಲೇ ಕಾನೂನು ಬದ್ಧ ಬಡ್ಡಿ ಸಾಲ ಕೊಟ್ಟಿರುವ ಅಧಿಕೃತ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿಗೆ ತೊಂದರೆ ಆಗದಂತೆ ನಿಗಾ ವಹಿಸತಕ್ಕದ್ದು. ಕಾನೂನುಬದ್ಧ ಮತ್ತು ನಿಜವಾದ ಸಾಲದಾತರು ತೊಂದರೆಯನ್ನು ಎದುರಿಸದಂತೆ, ಅವರ ಸಾಲದ ಬಾಕಿ ಮೊತ್ತವನ್ನು ಮರುಪಡೆಯಲು ಅವಕಾಶ ಕೊಡಬೇಕು. ಈಗಾಗಲೇ ಸಾಲ ಕೊಟ್ಟಿರುವ ನೊಂದಾಯಿತ ಸಂಸ್ಥೆಗಳ ಸಾಲ ಮರುಪಾವತಿಗೆ ಯಾವುದೇ ಪರಿಹಾರವಿಲ್ಲದಿದ್ದರೆ, ಇದು ಮುಂದೆ ಕಾನೂನು ವ್ಯಾಜ್ಯಗಳಿಗೆ ದಾರಿ ಮಾಡಿಕೊಡಲಿದೆ.
ಯಾವುದೇ ವ್ಯಕ್ತಿ ತನ್ನ ಹಕ್ಕುಗಳು ಮತ್ತು ಕಾನೂನು ಪರಿಹಾರಗಳಿಗಾಗಿ ಹೋರಾಡುವುದನ್ನು ತಡೆಯುವುದು ಭಾರತದ ಸಂವಿಧಾನದ 19 ಮತ್ತು 32 ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು. ಆದ್ದರಿಂದ, ರಾಜ್ಯ ಸರ್ಕಾರವು ಈ ಅಂಶದ ಬಗ್ಗೆ ಪುನರ್ವಿಮರ್ಶಿಸಬೇಕು ಮತ್ತು ಈ ನಿಟ್ಟಿನಲ್ಲಿ ಸರಿಪಡಿಸುವ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.