Connect with us

Latest

ಪೌರತ್ವ ಕಾಯ್ದೆ ಪರ ಮಾತು – ಕೇರಳ ರಾಜ್ಯಪಾಲರ ಭಾಷಣಕ್ಕೆ ವಿರೋಧ, ವೇದಿಕೆಯಲ್ಲಿ ಪ್ರತಿಭಟನೆ

Published

on

ತಿರುವನಂತಪುರ: ಕಣ್ಣೂರು ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಇತಿಹಾಸ ಕಾಂಗ್ರೆಸ್ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ವೇಳೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಭಾಷಣಕ್ಕೆ ಅಪಸ್ವರ ಕೇಳಿಬಂದಿದೆ.

ರಾಜ್ಯಪಾಲರು ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮಾತನಾಡಿದ್ದಾರೆ ಎಂದು ಕಣ್ಣೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿ, ಇತಿಹಾಸ ತಜ್ಞ ಇರ್ಫಾನ್ ಹಬೀಬ್ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾಷಣ ಮಾಡುವುದನ್ನು ಅರ್ಧಕ್ಕೇ ತಡೆದಿದ್ದಾರೆ.

ಇತಿಹಾಸ ತಜ್ಞ ಇರ್ಫಾನ್ ಹಬೀಬ್ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಖಾನ್ ಅವರು ಅವರ ಭಾಷಣದಲ್ಲಿ ರಾಜಕೀಯ ಭಾಷಣದಂತೆ ಗಣ್ಯರ ಹೇಳಿಕೆಗಳನ್ನು ತಮ್ಮ ಭಾಷಣದಲ್ಲಿ ಬಳಸಿದ್ದಾರೆ ಎಂದು ಇರ್ಫಾನ್ ಆರೋಪಿಸಿದ್ದಾರೆ.

ಈ ವೇಳೆ ರಾಜ್ಯಪಾಲರು ಇದಕ್ಕೆ ಉತ್ತರಿಸಿ, ನೀವು ಒಂದು ಅಜೆಂಡಾ ಇಟ್ಟುಕೊಂಡು ಬಂದಿದ್ದೀರಿ. ಹೀಗೆ ಕಿರುಚಾಡುವ ಮೂಲಕ ನನ್ನನ್ನು ಸುಮ್ಮನಿರಿಸಲು ಸಾಧ್ಯವಿಲ್ಲ. ಅಲ್ಲದೆ ಪ್ರತಿಭಟನಾಕಾರರು ಅಸಹಿಷ್ಣುತೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಾರ್ಯಕ್ರಮದಲ್ಲಿಯೇ ಇರ್ಫಾನ್ ಕೂಗಾಡಿದ್ದು, ಈ ಕುರಿತು ವಿಡಿಯೋದಲ್ಲಿ ದಾಖಲಾಗಿದೆ. ಖಾನ್ ಅವರೇ ಅಜೆಂಡಾ ಹೊಂದಿದ್ದಾರೆ. ಆದರೆ ಇದು ಪಾಕಿಸ್ತಾನವಲ್ಲ ಭಾರತ ಎಂದು ಕೂಗಿದ್ದಾರೆ.

ಪ್ರತಿಭಟನೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಾಜ್ಯಪಾಲರು ತಮ್ಮ ಭಾಷಣವನ್ನು ಮುಂದುವರಿಸಿದ್ದು, ಮೌಲಾನಾ ಆಜಾದ್ ಅವರು ವಿಭಜನೆಯ ಕೊಳೆಯನ್ನು ಅಳಿಸಿ ಹಾಕಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಇನ್ನೂ ಕೆಲವು ರಸ್ತೆ ಗುಂಡಿಗಳು ಉಳಿದಿವೆ. ಅದರಲ್ಲಿ ನೀರು ಸಂಗ್ರಹವಾಗಿದ್ದರಿಂದ ಇದೀಗ ಗಬ್ಬು ನಾರುತ್ತಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಅಸಮಾಧಾನಗೊಂಡ ಇರ್ಫಾನ್, ನಿಮ್ಮಿಂದ ದುರ್ವಾಸನೆ ಬರುತ್ತಿದೆ ಎಂದು ರಾಜ್ಯಪಾಲರಿಗೆ ತಿರುಗೇಟು ನೀಡಿ, ಮೌಲಾನಾ ಆಜಾದ್ ಅವರು ನಿಮ್ಮೆಲ್ಲರಿಗೂ ಇದನ್ನು ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ.

ಘಟನೆ ನಂತರ ರಾಜ್ಯಪಾಲರು ಈ ಕುರಿತು ಟ್ವೀಟ್ ಮಾಡಿ, ತಮ್ಮ ಭಾಷಣಕ್ಕೆ ಅಡ್ಡಿ ಪಡಿಸಿ ಪ್ರತಿಭಟಿಸಲು ಮುಂದಾದ ಇರ್ಫಾನ್ ಹಬೀಬ್ ಅವರ ಹೇಳಿಕೆ ಕುರಿತು ತಿಳಿಸಿದ್ದಾರೆ. ನನ್ನ ಭಾಷಣಕ್ಕೆ ಅಡ್ಡಿ ಪಡಿಸಿ, ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ನಾಯಕ ಮೌಲಾನಾ ಆಜಾದ್ ಬದಲಿಗೆ ಗೋಡ್ಸೆ ಅವರ ಹೆಸರನ್ನು ಉಲ್ಲೇಖಿಸುವಂತೆ ಕೂಗಿದರು ಎಂದು ಟ್ವೀಟಿನಲ್ಲಿ ತಿಳಿಸಿದ್ದಾರೆ.

ನಾನು ಭಾಷಣ ಮಾಡುವ ಮುನ್ನ ಮಾತನಾಡಿದ್ದ ಅತಿಥಿಗಳು ಎತ್ತಿದ್ದ ಅಂಶಗಳಿಗೆ ನಾನು ಉತ್ತರ ನೀಡುತ್ತಿದ್ದೆ. ಸಂವಿಧಾನವನ್ನು ರಕ್ಷಿಸುವುದು ನನ್ನ ಕರ್ತವ್ಯ. ಹೀಗಾಗಿ ನಾನು ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದು ಕೆಲವರಿಗೆ ಇಷ್ಟವಾಗದ್ದಕ್ಕೆ ಗಲಾಟೆ ಎಬ್ಬಿಸಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *