ಬೆಂಗಳೂರು: ವಿಧಾನಸೌಧದಲ್ಲಿ ಇದೇ 10ರಿಂದ 3 ದಿನ ನಡೆಯುವ ಅಧಿವೇಶನದಲ್ಲಿ ದೃಶ್ಯ ಮಾಧ್ಯಮಕ್ಕೆ ನಿರ್ಬಂಧ ಹೇರುವ ಬಗ್ಗೆ ಸರ್ಕಾರ ಚಿಂತಿಸಿದೆ ಎನ್ನಲಾಗುತ್ತಿದೆ.
ಸರ್ಕಾರದ ಈ ಚಿಂತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿ, ಬಹಳಷ್ಟು ಮಾಧ್ಯಮಗಳು ಬಿಜೆಪಿ ಪರವಾಗಿ ಕೆಲಸ ಮಾಡಿದ್ದವು. ಆ ಕಾರಣದಿಂದ ನಿಷೇಧ ಹೇರಲು ಹೊರಟಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನಿರ್ಬಂಧ ಹೇರಲು ಚಿಂತಿಸಿರಲಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಇತ್ತ ಮಡಿಕೇರಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಸಾಧ್ಯವಿಲ್ಲದ ಮಾತು. ವಿಧಾನಸೌಧದಲ್ಲಿ ಮೀಡಿಯಾ ಗ್ಯಾಲರಿ ಇದೆ ಎಂದು ತಿಳಿಸಿದರು.
Advertisement
ಈ ಹಿಂದೆಯೂ ಕೂಡ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ವಿಧಾನಸೌಧ ಕಲಾಪದಲ್ಲಿ ದೃಶ್ಯ ಮಾಧ್ಯಮ ನಿರ್ಬಂಧಕ್ಕೆ ಚಿಂತನೆ ನಡೆಸಲಾಗಿತ್ತು. ಆದರೆ ಅಂದು ಕೂಡ ವಿರೋಧ ಪಕ್ಷ ಹಾಗೂ ಮಾಧ್ಯಮಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಂತನೆಯನ್ನು ಕೈಬಿಡಲಾಗಿತ್ತು. ಆದರೆ ಸದ್ಯ ಈ ಚಿಂತನೆ ಮತ್ತೆ ನಡೆದಿದೆ ಎನ್ನಲಾಗಿದೆ. ಆ ಮೂಲಕ ಲೋಕಸಭಾ ಮಾದರಿಯಲ್ಲಿ ಕಲಾಪದ ನೇರ ಪ್ರಸಾರ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಸದನದಲ್ಲಿ ಮಾಡುವ ತಪ್ಪುಗಳನ್ನು ಮಾಧ್ಯಮಗಳು ತೋರಿಸುವ ಭಯದಿಂದ ಮಾಧ್ಯಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.