– ಕುಸಿದು ಬೀಳುವ ಆತಂಕದಲ್ಲಿ ಸರ್ಕಾರಿ ಶಾಲೆಗಳು
ಚಿಕ್ಕಬಳ್ಳಾಪುರ: ಈ ಬಾರಿ ಜಿಲ್ಲೆಯಲ್ಲಿ ಕಂಡು ಕೇಳರಿಯದಂತಹ ಮಳೆಯಾಗಿದೆ. ಪರಿಣಾಮ ಧಾರಕಾರ ಮಳೆಗೆ ಹಲವು ಅವಾಂತರಗಳು ಸಂಭವಿಸಿದ್ದು, ಈಗ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲಾ ಕಾಲೇಜು ಕಟ್ಟಡಗಳು ಹಾನಿಗೆ ಒಳಗಾಗಿ ಕೆಲ ಕಟ್ಟಡಗಳು ಕುಸಿಯುವ ಆತಂಕದಲ್ಲಿವೆ. ಚಿಕ್ಕಬಳ್ಳಾಪುರದ ಸುಮಾರು 300 ಸರ್ಕಾರಿ ಶಾಲೆಗಳ 600 ಕೊಠಡಿಗಳಿಗೆ ಹಾನಿಯಾಗಿದೆ.
ಕೊರೊನಾ ಕಡಿಮೆಯಾದ ಕಾರಣ ಸರಿ ಸುಮಾರು ಎರಡು ವರ್ಷಗಳ ನಂತರ ಶಾಲೆಗೆ ಬಂದ ಮಕ್ಕಳು ಈಗ ಪ್ರಾಣ ಭಯದಲ್ಲೇ ಪಾಠ ಕೇಳುವಂತಾಗಿದೆ. ಧಾರಕಾರ ಮಳೆಯ ಕಾರಣದಿಂದ ಮೊದಲೇ ಅಲ್ಪ ಸ್ವಲ್ಪ ಬಿರುಕು ಮೂಡಿದ್ದ ಹಲವು ಶಾಲಾ ಕಟ್ಟಡಗಳು ಈಗ ಮತ್ತಷ್ಟು ಬಿರುಕು ಬಿಟ್ಟಿವೆ. ಸೋರುತ್ತಿದ್ದ ಮೇಲ್ಛಾವಣಿಗಳು ಮತ್ತಷ್ಟು ಸೋರಲಾರಂಭಿಸಿವೆ. ಮಳೆಯ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಶಿಕ್ಷಕರ ಬಳಿಯಿಂದ ಮಾಹಿತಿ ಪಡೆದುಕೊಂಡಿದೆ. ಇದನ್ನೂ ಓದಿ: ಕಾಬೂಲ್ ಮಿಲಿಟರಿ ಆಸ್ಪತ್ರೆಯ ಮೇಲೆ ಉಗ್ರರ ದಾಳಿ – ಹಿರಿಯ ತಾಲಿಬಾನ್ ಕಮಾಂಡರ್ ಸಾವು
ಸಾರ್ವಜನಿಕರ ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ ಪ್ರಕಾರವೆ ಜಿಲ್ಲೆಯಾದ್ಯಂತ 300ಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕಟ್ಟಡಗಳ ಪೈಕಿ 562 ಕೊಠಡಿಗಳು ಮಳೆಯಿಂದ ಹಾನಿಯಾಗಿ ಅಪಾಯದಲ್ಲಿವೆ. ಇವುಗಳಲ್ಲಿ 60ಕ್ಕೂ ಹೆಚ್ಚು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿಯುವ ಆತಂಕದಲ್ಲಿದೆ. ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನ ನಿಲ್ಲಿಸಲಾಗಿದೆ ಎಂದು ಡಿಡಿಪಿಐ ಜಯರಾಮ್ ರೆಡ್ಡಿ ತಿಳಿಸಿದ್ದಾರೆ.
ರಿಯಾಲಿಟಿ ಚೆಕ್
ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಜಿಲ್ಲೆಯ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ರಿಯಾಲಿಟಿ ಚೆಕ್ ಮಾಡಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ಕುಪ್ಪಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಮೊದಲಿಗೆ ಶಾಲೆಗೆ ಮಕ್ಕಳು ಬರೋಕೆ ಸಮರ್ಪಕ ರಸ್ತೆಯೇ ಇಲ್ಲ. ಇನ್ನೂ ಶಾಲಾ ಕಟ್ಟಡದ ದುಸ್ಥಿತಿ ದೇವರಿಗೆ ಪ್ರೀತಿ ಎಂಬಂತಿದೆ. ಶಾಲಾ ಕಟ್ಟಡದ ಆಡಳಿತ ಕಚೇರಿ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದ್ದು, ಈಗಾಗಲೇ ಪಿಲ್ಲರ್ ಒಂದು ಇಂಚಿನಷ್ಟು ಕುಸಿತ ಆಗಿ ಇಡೀ ಕಟ್ಟಡದ ಉದ್ದಕ್ಕೂ ದೊಡ್ಡದಾದ ಬಿರುಕು ಮೂಡಿ ಅಪಾಯದ ಅಂಚಿನಲ್ಲಿದೆ.
ಬೇರೆ ಕಟ್ಟಡ ಇಲ್ಲದೆ ಅದೇ ಕಟ್ಟಡದಲ್ಲಿ ಆಡಳಿತ ಕಚೇರಿ ನಡೆಸಲಾಗುತ್ತಿದ್ದು, ಶಿಕ್ಷಕರು ಜೀವಭಯದಲ್ಲೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಮತ್ತೊಂದೆಡೆ ಶಾಲಾ ಕೊಠಡಿಗಳು ಸಹ ಬಹಳಷ್ಟು ಹಾನಿಯಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ನೀರಿನಿಂದ ನೆನೆದು ತನ್ನ ಸಾಮಥ್ರ್ಯ ಕಳೆದುಕೊಂಡಿದ್ದು, ಕಪ್ಪು ಕಪ್ಪು ಕಲೆಗಳಾಗಿ ಪಾಚಿ ಬೆಳದುಕೊಂಡಿದೆ. ಇಂತಹ ಕೊಠಡಿಗಳಲ್ಲೇ ವಿದ್ಯಾರ್ಥಿಗಳಿಗೆ ಪ್ರಾಣ ಭಯದಲ್ಲಿ ಪಾಠ ಪ್ರವಚನ ಮಾಡಲಾಗುತ್ತಿದೆ. ಸಮಸ್ಯೆ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳು ಗಮನಹರಿಸುವಂತೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ
7 ಕೋಟಿ ಅನುದಾನದ ಬೇಡಿಕೆ!
ಕೊರೊನಾ ಕಾರಣದಿಂದ ಈಗಷ್ಟೇ ಆರಂಭವಾಗಿರುವ ಶಾಲೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮನವಾಗ್ತಿದ್ದು, ಕೊಠಡಿಗಳು ಸದ್ಯಕ್ಕೆ ಸಾಕಾಗುತ್ತಿವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದರೆ ಬೀದಿಯಲ್ಲಿ ಪಾಠ ಮಾಡಬೇಕಾಗುತ್ತೆ. ನವೆಂಬರ್ ತಿಂಗಳು ಕನ್ನಡ ಕನ್ನಡ ಅಂತ ಭಾಷಣ ಬಿಗಿಯೋದು ಬಿಟ್ಟು ಕನ್ನಡದ ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸಿ ತುರ್ತು ಕಾಯಕಲ್ಪ ಮಾಡಬೇಕಿದೆ. ಅಪಾಯದ ಅಂಚಿನಲ್ಲಿರುವ ಕೊಠಡಿಗಳ ದುರಸ್ಥಿಗೆ ಅಂದಾಜು 7-8 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು, ಅನುದಾನ ಮಂಜೂರು ಮಾಡಿ ದುರಸ್ಥಿ ಮಾಡಬೇಕಿದೆ. ಅನಾಹುತ ಸಂಭವಿಸೋ ಮುನ್ನ ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.