ಕಾರವಾರ: ತಮಗೆ ತಡವಾಗಿ ಮತ್ತು ಅಸಮರ್ಪಕವಾಗಿ ಊಟ ನೀಡಲಾಗುತ್ತದೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮುಂಡಗೋಡು ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಅಕ್ಷರದಾಸೋಹ ಯೋಜನೆಯಡಿಯಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿಯೂಟವನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂಬುದು ಇಲ್ಲಿನ ವಿದ್ಯಾರ್ಥಿಗಳ ಆರೋಪವಾಗಿದೆ.
Advertisement
ಮಧ್ಯಾಹ್ನ ಮೊದಲು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಊಟ ನೀಡಿ ಕೊನೆಯಲ್ಲಿ ತಮಗೆ ಊಟ ಬಡಿಸಲಾಗುತ್ತದೆ. ಸ್ವಲ್ಪ ಅನ್ನ, ಉಳಿದ ಸಾಂಬಾರ್ ಗೆ ಮೆಣಸಿನಪುಡಿ ಹಾಗೂ ಉಪ್ಪು ಮಿಶ್ರಣ ಮಾಡಿ ಬಡಿಸಲಾಗುತ್ತದೆ. ಮತ್ತೆ ಅನ್ನ ಹಾಕಿ ಎಂದು ಕೇಳಿದರೆ ಖಾಲಿ ಆಯ್ತು ಸಿಬ್ಬಂದಿ ಹೇಳುತ್ತಾರೆ. ಅಲ್ಲದೆ ಕೆಲವು ಬಾರಿ ಅನ್ನದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತವೆ ಎಂದು 5, 6 ಹಾಗೂ 7ನೇ ತರಗತಿ ವಿದ್ಯಾರ್ಥಿಗಳು ದೂರಿದ್ದಾರೆ.
Advertisement
ಶನಿವಾರದಂದು ಪಲಾವ್ ಹಾಗೂ ಉಪಹಾರವನ್ನು ಕೂಡ ಸರಿಯಾಗಿ ನೀಡುವುದಿಲ್ಲ. ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಇಲ್ಲಿಗೆ ವ್ಯಾಸಂಗಕ್ಕೆ ಬರುತ್ತಾರೆ. ಆದರೆ ಹೊಟ್ಟೆ ತುಂಬ ಊಟ ಸಿಗುವುದಿಲ್ಲ ಎಂದು ಮಕ್ಕಳು ಆರೋಪಿಸಿದ್ದಾರೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಸುಮಾರು 650 ವಿದ್ಯಾರ್ಥಿಗಳು ಓದುತ್ತಿದ್ದು, 6 ಅಡುಗೆ ಸಿಬ್ಬಂದಿ ಇದ್ದಾರೆ. ಆದರೂ ಸಮರ್ಪಕವಾಗಿ ಅಡುಗೆ ಮಾಡದೇ ಮಕ್ಕಳಿಗೆ ಹೊಟ್ಟೆ ತುಂಬ ಊಟ ನೀಡದಿರುವುದು ಮಕ್ಕಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆ ಬಗ್ಗೆ ತಿಳಿದು ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯಶಿಕ್ಷಕ ವಿನೋದ ನಾಯ್ಕ ಅವರು ಮಕ್ಕಳನ್ನು ಸಮಾಧಾನ ಮಾಡಿ, ಸಮಸ್ಯೆ ಭಗೆಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಹಿಂದೆ ಪಡೆದರು.