ಬೆಂಗಳೂರು: ಸಾವಿರಾರು ಜನರಿಗೆ ವಂಚನೆಗೈದು ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾದ ಬಳಿಕ ಆತ ದತ್ತು ಪಡೆದಿದ್ದ ಶಾಲೆಯ 960 ವಿದ್ಯಾರ್ಥಿಗಳು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನ್ಸೂರ್ ಖಾನ್ 2 ವರ್ಷಗಳ ಹಿಂದೆ ತಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದ ಶಿವಾಜಿನಗರದ ಸರ್ಕಾರಿ ವಿಕೆಒ ಪಬ್ಲಿಕ್ ಶಾಲೆಯನ್ನು ದತ್ತು ಪಡೆದಿದ್ದ. ಈ ಶಾಲೆಗೆ ಐಎಂಎ ಸಂಸ್ಥೆಯ ಮೂಲಕ 76 ಶಿಕ್ಷಕರನ್ನು ನೇಮಿಸಿ ಖಾಸಗಿ ಸಂಸ್ಥೆಗಳು ನಾಚುವಂತೆ ಅಭಿವೃದ್ಧಿಪಡಿಸಿದ್ದ. ಹಳೆ ಕಟ್ಟಡದ ನವೀಕರಣಗೊಳಿಸಿ, ಶಾಲೆಗೆ ಕಂಪ್ಯೂಟರ್ ಗಳನ್ನು ನೀಡಿ ಹೈಟೆಕ್ ಶಾಲೆಯಂತೆ ರೂಪಿಸಿದ್ದ. ಶಾಲೆಯ ವಿನ್ಯಾಸ ಬದಲಾದ ನಂತರ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು.
ವಿಕೆಒ ಪಬ್ಲಿಕೆ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ತರಗತಿಯಿಂದ ಕಾಲೇಜು ಶಿಕ್ಷಣವರೆಗೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಗೆ ಸರ್ಕಾರ ಇಬ್ಬರು ಶಿಕ್ಷಕರನ್ನು ನೇಮಿಸಿದ್ದು, ಇನ್ನುಳಿದ 76 ಶಿಕ್ಷಕರು ಮನ್ಸೂರ್ ಖಾನ್‍ನ ಐಎಂಎ ಸಂಸ್ಥೆ ಮೂಲಕ ನೇಮಕಗೊಂಡಿದ್ದ. ಈಗ ಮನ್ಸೂರ್ ನಾಪತ್ತೆಯಾದ ಬೆನ್ನಲ್ಲೇ 56 ಶಿಕ್ಷಕರು ಶಾಲೆಗೆ ಬರಲು ಹಿಂದೇಟು ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲೆ ನಫೀವುನ್ನೀಸಾ, ಶಾಲೆಯ ಶಿಕ್ಷಕರ ಮತ್ತು ಸಿಬ್ಬಂದಿ ವೇತನ ಸೇರಿದಂತೆ ಇತರೆ ವೆಚ್ಚಗಳಿಗೆ ಪ್ರತಿ ತಿಂಗಳು 32 ಲಕ್ಷ ಹಣವನ್ನು ಮನ್ಸೂರ್ ವಿನಿಯೋಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಐಎಂಎ ಸಂಸ್ಥೆಯಿಂದ ನೇಮಕಗೊಂಡಿರುವ ಶಿಕ್ಷಕರಿಗೆ ವೇತನ ಸಮಸ್ಯೆಯ ಜೊತೆ ಭವಿಷ್ಯದ ಚಿಂತೆ ಆರಂಭವಾಗಿದೆ. ನಮ್ಮ ಸಂಬಳ ಸಮಸ್ಯೆ ಇತ್ಯರ್ಥವಾಗುವವರೆಗೆ ಪಾಠ ಮಾಡುವುದಿಲ್ಲ ಎಂದು ಹಠ ಹಿಡಿದ ಹಿನ್ನೆಲೆಯಲ್ಲಿ ಶಾಲೆಗೆ ಅನಿವಾರ್ಯವಾಗಿ ರಜೆ ನೀಡಲಾಗಿದೆ.