ಶಿವಮೊಗ್ಗ: ನೆರೆಯಿಂದ ಹಾನಿಗೊಳಗಾದ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ದುರಸ್ಥಿಗಾಗಿ ಸಲ್ಲಿಸಿದ್ದ 124 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್ ವೈಶಾಲಿ ತಿಳಿಸಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ ನಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಳೆಗಾಲದಲ್ಲಿ ಜಿಲ್ಲೆಯ ರಸ್ತೆಗಳು ಹೆಚ್ಚಿನ ಮಟ್ಟದಲ್ಲಿ ಹಾನಿಯಾಗಿವೆ. ಇವುಗಳ ದುರಸ್ಥಿ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಹೀಗಾಗಿ 124 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಜಿಲ್ಲೆಯಲ್ಲಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದ್ದು, ಇದರ ಜೊತೆಗೆ ಏಕ ಗ್ರಾಮ ಕುಡಿಯುವ ನೀರಿನ ಯೋಜನೆಯೂ ಸೇರಿಕೊಂಡಿದೆ. ಈ ಯೋಜನೆಗಾಗಿ ಕೇಂದ್ರದಿಂದ 86 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ಸುಮಾರು 48 ಕೋಟಿ ರೂಪಾಯಿ ಈಗಾಗಲೇ ಕುಡಿಯುವ ನೀರಿನ ಯೋಜನೆಗೆ ವೆಚ್ಚ ಮಾಡಲಾಗಿದೆ ಎಂದರು.
Advertisement
ಈಗಾಗಲೇ ಬಾರಂದೂರು, ಬಿಳಕಿ, ಕಂಬದಾಳ ಹೊಸೂರು, ಕೂಡ್ಲಿಗೆರೆ, ಮಂಡಗದ್ದೆಗಳಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಸುಮಾರು 828 ಶಾಲೆಗಳು ದುಸ್ಥಿತಿಯಲ್ಲಿವೆ. ಇವುಗಳ ದುರಸ್ಥಿಗೆ ಸರ್ಕಾರದಿಂದ 34 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಇದರಲ್ಲಿ 3 ಕೋಟಿ ಅನುದಾನವನ್ನು ಅಂಗನವಾಡಿಗಳಿಗೆ ನೀಡಲಾಗುತ್ತದೆ. ಜೊತೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ ಸಿಇಒ ವೈಶಾಲಿ ತಿಳಿಸಿದರು.