.ad-label:empty { display: none; }

ಕಾರಂಜಿ ಕೆರೆಯಲ್ಲಿ ಮತ್ಸ್ಯಾಗಾರ ಬದಲಿಗೆ ಪೆಂಗ್ವಿನ್ ಪಾರ್ಕ್ ನಿರ್ಮಿಸಲು ಮುಂದಾದ ಸರ್ಕಾರ

Public TV
2 Min Read
Karanji Park

-ಮೈಸೂರು ಮೃಗಾಲಯ, ಬನ್ನೇರುಘಟ್ಟ ಝೂ ಪ್ರವೇಶ ಶುಲ್ಕ ಶೇ.20ರಷ್ಟು ಹೆಚ್ಚಳ
– ಸಫಾರಿ ದರದಲ್ಲಿ ಹೆಚ್ಚಳ ಇಲ್ಲ, ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸೂಚನೆ

ಮೈಸೂರು: ಜಿಲ್ಲೆಯ ಕಾರಂಜಿ ಕೆರೆಯಲ್ಲಿರುವ ಮತ್ಸ್ಯಾಗಾರ ಬದಲಿಗೆ ಪೆಂಗ್ವಿನ್ ಪಾರ್ಕ್ (Penguin Park) ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಜೊತೆಗೆ ಮೈಸೂರು ಮೃಗಾಲಯ (Mysuru Zoo), ಬನ್ನೇರುಘಟ್ಟ ಝೂ (Bannerghatta) ಪ್ರವೇಶ ಶುಲ್ಕವನ್ನು ಶೇ.20ರಷ್ಟು ಹೆಚ್ಚಿಸಲು ನಿರ್ಧರಿಸಿದೆ.

ವಿಕಾಸಸೌಧದಲ್ಲಿಂದು ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಈಶ್ವರ ಬಿ ಖಂಡ್ರೆ ಅವರು, ಮತ್ಸ್ಯಾಗಾರದ ಕಟ್ಟಡದಲ್ಲಿ ಪೆಂಗ್ವಿನ್ ಧಾಮ ಮಾಡುವುದು ಸೂಕ್ತವೆಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.ಇದನ್ನೂ ಓದಿ: ವಡೋದರಾ ಸೇತುವೆ ದುರಂತ – ಸಾವಿನ ಸಂಖ್ಯೆ 17ಕ್ಕೆ ಏರಿಕೆ

ಮೃಗಾಲಯಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸಿದರೆ, ಹೊಸ ವನ್ಯಜೀವಿಗಳು ಸೇರ್ಪಡೆಯಾದರೆ ಪ್ರವಾಸಿಗರಿಗೆ ಹೆಚ್ಚಿನ ಆಕರ್ಷಣೆ ಇರುತ್ತದೆ. ಈ ನಿಟ್ಟಿನಲ್ಲಿ ವಿದೇಶಿ ಮೃಗಾಲಯಗಳೊಂದಿಗೆ ವಿನಿಮಯ ಕಾರ್ಯಕ್ರಮಕ್ಕೆ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಮುಂದಿನ 5 ವರ್ಷಗಳಲ್ಲಿ ಆಯಾ ಮೃಗಾಲಯಗಳು ತಮ್ಮ ಖರ್ಚು, ವೆಚ್ಚವನ್ನು ತಾವೇ ನಿರ್ವಹಿಸಲು ಶಕ್ತವಾಗುವಂತೆ ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಅನುವಾಗುವಂತೆ ಯೋಜನೆ ರೂಪಿಸಲು ತಿಳಿಸಿದರು.

bannerghatta national park

ಗಣಿಬಾಧಿತ ಜಿಲ್ಲೆಗಳಲ್ಲಿರುವ ಮೃಗಾಲಯಗಳ ಅಭಿವೃದ್ಧಿಗೆ ಕೆಎಂಇಆರ್‌ಸಿ ನಿಧಿಯನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ದಾವಣಗೆರೆಯ ಮೃಗಾಲಯ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದರು. ಬೀದರ್‌ನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಕ್ಷಿಧಾಮ, ವಿದೇಶಿ ಹಕ್ಕಿ, ಪಕ್ಷಿಗಳ ವಿಶಿಷ್ಟವಾದ ಪಕ್ಷಿಲೋಕವನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ತಿಳಿಸಿದರು. ಜೊತೆಗೆ ಈ ಯೋಜನೆಗೆ 20 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ಸೂಚಿಸಿದರು.

mys cool zoo

ಇನ್ನೂ ಮೈಸೂರಿನ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಮೃಗಾಲಯದಲ್ಲಿನ ಪಶು, ಪಕ್ಷಿಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವೇಶ ದರವನ್ನು ಶೇ.50ರಷ್ಟು ಹೆಚ್ಚಿಸಬೇಕೆಂಬ ಪ್ರಾಧಿಕಾರದ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದರು. ಏಕಾಏಕಿ ಶೇ.50ರಷ್ಟು ಹೆಚ್ಚಳ ಮಾಡುವುದು ಸರಿಯಲ್ಲ. ಶೇ.20ರಷ್ಟು ಮಾತ್ರವೇ ದರ ಹೆಚ್ಚಳ ಮಾಡಿ ಎಂದು ಅನುಮೋದನೆ ನೀಡಿದರು. ಸಫಾರಿ ದರ ಹೆಚ್ಚಿಸದಂತೆ ಸೂಚಿಸಿದರು. ವನ್ಯಜೀವಿ ವೀಕ್ಷಣೆಗೆ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಮೃಗಾಲಯದಲ್ಲಿ ಮತ್ತು ಜೈವಿಕ ಉದ್ಯಾನದಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಧಾಮ, ಪುರುಷ ಮತ್ತು ಮಹಿಳೆಯರ ಶೌಚಾಲಯದ ಜೊತೆಗೆ ಹೆಚ್ಚಿನ ಸೌಲಭ್ಯ, ಸೌಕರ್ಯಗಳನ್ನು ಒದಗಿಸುವಂತೆ ಮತ್ತು ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ಯಾವುದೇ ಕಾರಣಕ್ಕೂ ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯ ಮೃಗಾಲಯ ಮತ್ತು ಜೈವಿಕ ಉದ್ಯಾನ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿದರು.

ಸಭೆಯಲ್ಲಿ ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ.ರೇ,ಅಧಿಕಾರಿಗಳಾದ ಸುನೀಲ್ ಪಾಂವಾರ್, ಸೂರ್ಯಸೇನ್ ಮತ್ತಿತರರು ಪಾಲ್ಗೊಂಡಿದ್ದರು.ಇದನ್ನೂ ಓದಿ: ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ ಮಾಡುವ ಖಾತೆಗಳು ಕಂಡ್ರೆ ಸೈಬರ್‌ ಸೆಲ್‌ಗೆ ದೂರು ನೀಡಿ – ಸಿಎಂ

Share This Article