– ಇತಿಹಾಸ ಪುಟ ಸೇರಲಿದೆ ಬಿಬಿಎಂಪಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಆಗೋದು ಫಿಕ್ಸ್ ಆಗಿದೆ. ಹೌದು.. 2008 ರಲ್ಲಿ 110 ಹಳ್ಳಿಗಳನ್ನು ಸೇರಿಸಿ ರಚಿಸಿದ್ದ ಬಿಬಿಎಂಪಿಯನ್ನು ಸರ್ಕಾರ ಆಡಳಿತ ದೃಷ್ಟಿಯಿಂದ ವಿಭಜನೆ ಮಾಡಲು ಹೊರಟಿದೆ. ಈ ಸಂಬಂಧ ವಿಧಾನಸಭೆಯಲ್ಲಿ ಇಂದು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ಬಿಜೆಪಿಯವರ ತೀವ್ರ ವಿರೋಧದ ನಡುವೆಯೂ ಸರ್ಕಾರ ಪಾಸ್ ಮಾಡಿಕೊಂಡಿದೆ.
ಅಷ್ಟಕ್ಕೂ ಏನಿದು ಗ್ರೇಟರ್ ಬೆಂಗಳೂರು ಬಿಲ್? ಬಿಬಿಎಂಪಿ ಎಷ್ಟು ಹೋಳಾಗಲಿದೆ? ಅನ್ನೋದನ್ನ ತಿಳಿಯಬೇಕಿದ್ರೆ ಮುಂದೆ ಓದಿ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ ನಾಲ್ಕೂವರೆ ರ‍್ಷದಿಂದ ಚುನಾವಣೆ ನಡೆದಿಲ್ಲ. ಅಲ್ಲಿಂದೀಚೆಗೆ ಮೂರು ಸರ್ಕಾರ, ನಾಲ್ವರು ಸಿಎಂಗಳು ಬದಲಾಗಿದ್ದಾರೆ, ಆದ್ರೆ ಯಾರೂ ಬಿಬಿಎಂಪಿಗೆ ಚುನಾವಣೆ ನಡೆಸುವ ಮನಸು ಮಾಡ್ಲಿಲ್ಲ. ಪ್ರತೀ ಬಾರಿಯೂ ಬಿಬಿಎಂಪಿ ಚುನಾವಣೆ ವಿಚಾರ ಸದ್ದು ಮಾಡಿದಾಗ ಸರ್ಕಾರ ಏನಾದರೂ ನೆಪ ಹುಡುಕಿಕೊಳ್ಳುವ ಪರಿಪಾಠ ಶುರು ಮಾಡಿದೆ. ಇದನ್ನೂ ಓದಿ: ತಂಬಾಕು, ಮದ್ಯದ ಜಾಹೀರಾತು ನಿಯಂತ್ರಿಸಿ – ಬಿಸಿಸಿಐ ಅಧ್ಯಕ್ಷರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ
ಈ ಸಲ ಬಿಬಿಎಂಪಿ ಚುನಾವಣೆಗೆ ರ‍್ಕಾರ ಕಂಡುಕೊಂಡಿರುವ ಹೊಸ ಕಾರಣ ʻಗ್ರೇಟರ್ ಬೆಂಗಳೂರುʼ ಬಿಲ್. ಹಾಲಿ ಇರುವ ಬಿಬಿಎಂಪಿ ವಿಭಜಿಸಿಯೇ ಚುನಾವಣೆ ಮಾಡ್ತೇವೆ ಅಂತ ಕಾಂಗ್ರೆಸ್ ಸರ್ಕಾರ ಹೊರಟಿದೆ. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಸರ್ಕಾರ ಇಂದು ಮಹತ್ವದ ಹೆಜ್ಜೆ ಇರಿಸಿದೆ. ಬಿಬಿಎಂಪಿಗೆ ಬಿಗ್ ಆಪರೇಷನ್ ಮಾಡುವ ಗ್ರೇಟರ್ ಬೆಂಗಳೂರು ಬಿಲ್ ಅನ್ನು ಇಂದು ಸರ್ಕಾರ ವಿಧಾನಸಭೆಯಲ್ಲಿ ಪಾಸ್ ಮಾಡಿಕೊಂಡಿದೆ.
ಬಿಜೆಪಿಯವರ ತೀವ್ರ ವಿರೋಧದ ನಡುವೆಯೂ ಸರ್ಕಾರ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಬಿಲ್ ಪಾಸ್ ಮಾಡಿಕೊಂಡಿದೆ. ಸರ್ಕಾರದ ನಡೆ ಖಂಡಿಸಿ ಬಿಜೆಪಿ ಸದಸ್ಯರು ಧಿಕ್ಕಾರ ಘೋಷಣೆ ಕೂಗಿದ್ದರಲ್ಲದೇ, ಸಭಾತ್ಯಾಗ ನಡೆಸಿ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುಜರಾತ್ | 5 ವರ್ಷದ ಬಾಲಕಿಯ ನರಬಲಿ – ದೇವಾಲಯದ ಮೆಟ್ಟಿಲುಗಳ ಮೇಲೆ ರಕ್ತ ಅರ್ಪಿಸಿದ ಪಾಪಿ!
ಗ್ರೇಟರ್ ಬೆಂಗಳೂರು ಬಿಲ್‌ನಲ್ಲಿ ಏನಿದೆ? ಎಷ್ಟು ಪಾಲಿಕೆ ಬರಲಿವೆ?
ಇನ್ನು ಮುಂದೆ ಬಿಬಿಎಂಪಿ ಹೆಸರಿನ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬರಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. ಜನ ಪ್ರತಿನಿಧಿಗಳನ್ನು ವಿವಿಧ ಏಜೆನ್ಸಿಯವರನ್ನು ಒಳಗೊಳ್ಳಲಾಗಿದೆ. ಪೊಲೀಸರು, ನೀರು ಸರಬರಾಜು, ಸಾರಿಗೆ, ಅಗ್ನಿಶಾಮಕ, ನಗರ ಯೋಜನೆ ಸೇರಿ ಎಲ್ಲರೂ ಸಮಿತಿ ಸದಸ್ಯರಾಗಿರುತ್ತಾರೆ. ಬಿಬಿಎಂಪಿಯನ್ನು 2 ರಿಂದ 7 ನಗರ ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ.
ಪ್ರತೀ ಪಾಲಿಕೆಗೆ 100 ಮೀರದಂತೆ 200ರ ಒಳಗೆ ವಾರ್ಡ್‌ಗಳ ಹಂಚಿಕೆ ಮಾಡಲಾಗುತ್ತದೆ. ಮೇಯರ್/ಉಪಮೇಯರ್‌ಗಳ ಅಧಿಕಾರವು 1 ವರ್ಷದ ಬದಲು 2.5 ವರ್ಷಕ್ಕೆ ನಿಗದಿಯಾಗಲಿದೆ. ಸದಸ್ಯರ ಅಧಿಕಾರದವಧಿ 5 ವರ್ಷಕ್ಕೆ ನಿಗದಿಯಾಗಲಿದೆ. ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇರಬಾರದು. 300 ಕೋಟಿ ಕನಿಷ್ಠ ಆದಾಯ ಇರಬೇಕು. ಪ್ರತೀ ನಗರಪಾಲಿಕೆಗೆ ಬೆಂಗಳೂರಿನ ಹೆಸರಿನಿಂದಲೇ ಶೀರ್ಷಿಕೆ ಇರಬೇಕು. ಉದಾ. ಬೆಂ. ಉತ್ತರ, ಬೆಂ. ದಕ್ಷಿಣ ರೀತಿಯಲ್ಲಿರುತ್ತದೆ. ಅಲ್ಲದೇ 6 ತಿಂಗಳ ಮೊದಲು ಮೇಯರ್ ವಿರುದ್ಧ ಅವಿಶ್ವಾಸ ತರಲು ಅವಕಾಶ ಇಲ್ಲ. ಶಾಸಕರು ಮತ ಹಾಕಲು ಅದೇ ಪ್ರದೇಶದಲ್ಲೇ ವಾಸ ಇರುವವರಾಗಿರಬೇಕು. ಪಾಲಿಕೆಯ ವಾರ್ಡ್‌ಗಳಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ ಇರುತ್ತದೆ. ಸ್ಥಳೀಯ ಸಮಿತಿಗಳು ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗಲಿದೆ. ಇದನ್ನೂ ಓದಿ: ನಟಿ ರನ್ಯಾಗೆ KIADB ಜಾಗ ಕೊಟ್ಟಿದ್ದೇ ಬಿಜೆಪಿ, ಈಗ ಕಾಂಗ್ರೆಸ್ ಮೇಲೆ ಆರೋಪ ಮಾಡೋ ನೈತಿಕತೆ ಅವರಿಗಿಲ್ಲ: ಹೆಚ್.ಸಿ ಬಾಲಕೃಷ್ಣ
ಸರ್ಕಾರದ ವಾದವೇನು?
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಬಿಬಿಎಂಪಿಗೆ ಹೊಸ ರೂಪ ಸಿಗಲಿದೆ. ನಗರ ತಜ್ಞರು, ಹಲವು ವಲಯಗಳ ಗಣ್ಯರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಮಾಡಲಾಗುತ್ತದೆ. ಬೆಂಗಳೂರನ್ನು ಒಡೆಯುತ್ತಿಲ್ಲ, ಬದಲಾಗಿ ಇನ್ನೂ ಗಟ್ಟಿ ಮಾಡುತ್ತಿದ್ದೇವೆ. ಈಗ ಇರುವ ಪರಿಸ್ಥಿತಿಯಲ್ಲಿ ಬೆಂಗಳೂರು ಆಡಳಿತ ಕಷ್ಟ ಸಾಧ್ಯವಾಗಿದೆ. ನಾವು ಮಾಡುತ್ತಿರುವುದು ಅಧಿಕಾರ ವಿಕೇಂದ್ರೀಕರಣ, ವಿಭಜನೆ ಅಲ್ಲ. ಬೆಂಗಳೂರಿಗೆ ಹೊಸ ದಿಕ್ಕನ್ನು ಕೊಡಬೇಕೆಂದು ಈ ಪ್ರಯತ್ನವನ್ನು ಮಾಡುತ್ತಿದ್ದೇವೆ. ರಚನೆ ಆಗಲಿರುವ ಹೊಸ ನಗರಪಾಲಿಕೆಗಳಿಗೆ ತಾರತಮ್ಯ ಆಗುವುದಿಲ್ಲ.
ಶಾಸಕರಿಗೆ ವಾರ್ಡ್‌ಗಳ ಮೇಲೆ ಹಿಡಿತ ಇರುವಂತೆ ವಾರ್ಡ್ ಸಮಿತಿಗಳ ರಚನೆ ಮಾಡಲಾಗುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪೊಲೀಸರನ್ನು, ಬಿಡಿಎ ಆಯುಕ್ತರು, ಬಿಎಂಟಿಸಿ, ಬೆಸ್ಕಾಂ ಎಂಡಿಗಳನ್ನೂ, ಟ್ರಾಫಿಕ್, ಸ್ಲಂ ಬೋರ್ಡ್ ಪ್ರಮುಖರ ಸೇರ್ಪಡೆ ಮಾಡಲಾಗುವುದು. ಬಿಬಿಎಂಪಿ ಎಷ್ಟು ವಿಭಜನೆ ಮಾಡಬೇಕು ಎಂದು ಚರ್ಚಿಸಿ ತೀರ್ಮಾನ ಮಾಡಲಾಗುವುದು. ಹೊಸ ಪಾಲಿಕೆಗಳಿಗೆ ಬೆಂಗಳೂರು ಹೆಸರೇ ಇರಲಿದೆ. ಬೆಂಗಳೂರಿನ ಸ್ವಾಭಿಮಾನ ಉಳಿಸುತ್ತೇವೆ. ಮೇಯರ್, ಉಪಮೇಯರ್ ಅಧಿಕಾರದ ಅವಧಿಯನ್ನು 2.5 ವರ್ಷಕ್ಕೆ ನಿಗದಿ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ತಮಿಳಿನತ್ತ ನಟಿ- ಬಿಗ್ ಚಾನ್ಸ್ ಬಾಚಿಕೊಂಡ ಮೇಘಾ ಶೆಟ್ಟಿ
ಬಿಜೆಪಿ ವಾದವೇನು?
ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಕಾಂಗ್ರೆಸ್ ವಿಭಜನೆ ಮಾಡುತ್ತಿದೆ. ಬಿಬಿಎಂಪಿ ವಿಭಜಿಸಿ ಬೆಂಗಳೂರು ಖ್ಯಾತಿ ಹಾಳು ಮಾಡುತ್ತಿದ್ದಾರೆ. ಗ್ರೇಟರ್ ಬೆಂಗಳೂರು ಬಿಲ್‌ನಿಂದ ಕನ್ನಡಕ್ಕೆ, ಕನ್ನಡಿಗರಿಗೆ ಅಪಾಯ ಎದುರಾಗಲಿದೆ. ಐದಾರು ಭಾಗ ಮಾಡಿದರೆ ಕನ್ನಡದವರು ಮೇಯರ್ ಆಗಲ್ಲ, ಬದಲಾಗಿ ಬೇರೆ ಭಾಷಿಕರು ಆಗುತ್ತಾರೆ ಬಜೆಪಿಗರು ಕಿಡಿಕಾರಿದರು.
ಈ ಬಿಲ್ ಬೆಂಗಳೂರು ಪಾಲಿಗೆ ಮರಣ ಶಾಸನವಾಗಲಿದೆ. ಇಂದು ಬೆಂಗಳೂರಿಗೆ ಕರಾಳ ದಿನವಾಗಿದೆ. ಬೆಂಗಳೂರಿನ 1 ಕೋಟಿ ಜನರನ್ನ ನೋಡಿಕೊಳ್ಳಲು ಒಬ್ಬ ಮೇಯರ್‌ನಿಂದ ಆಗುವುದಿಲ್ವಾ? ಕರ್ನಾಟಕಕ್ಕೆ ಒಬ್ಬರೇ ಸಿಎಂ, ದೇಶಕ್ಕೆ ಒಬ್ಬರೇ ಪ್ರಧಾನಿ ಇದ್ದಾರಲ್ವಾ? 5 ಪಾಲಿಕೆ ಬದಲು, ಐವರು ಆಯುಕ್ತರು ಮಾಡಿ, ಎಲ್ಲಾ ಅಧಿಕಾರ ಅವರಿಗೆ ಕೊಡಿ. ಬೆಂಗಳೂರು ಒಟ್ಟಾದ್ರೆ ಬ್ರ‍್ಯಾಂಡ್ ಬೆಂಗಳೂರು ಆಗಲಿದೆ. ಪಾಲಿಕೆಯನ್ನು ನಾಲ್ಕೈದು ವಿಭಜನೆ ಮಾಡಿದರೆ ಬೆಂಗಳೂರಿಗೆ ಸಮಸ್ಯೆ ಎದುರಾಗಲಿದೆ. ಒಂದೊಂದು ಪಾಲಿಕೆಗೆ ಒಬ್ಬೊಬ್ಬ ಮೇಯರ್ ಬಂದರೆ ಬೇಧಭಾವ ಶುರುವಾಗಲಿದೆ. ಮೇಯರ್‌ಗಳು ತಮ್ಮ ಪಾಲಿಕೆಗಳಿಗೆ ಬೇರೆಬೇರೆ ಕಾರ್ಯಕ್ರಮ ಘೋಷಣೆ ಮಾಡಿದರೆ ತಾರತಮ್ಯವಾಗುತ್ತದೆ. ಕೇಂದ್ರದ ಡೀಲಿಮಿಟೇಷನ್ ಬಳಿಕ ಮತ್ತೆ ವಾರ್ಡ್ ಮರು ಹಂಚಿಕೆ ಸಮಸ್ಯೆ ಬರಲಿದೆ ಎಂದು ವಿರೋಧ ವ್ಯಕ್ತಪಡಿಸಿತು. ಇದನ್ನೂ ಓದಿ: ಮುಳಬಾಗಿಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠೇಗೌಡ ಹೃದಯಾಘಾತದಿಂದ ನಿಧನ
ಒಟ್ಟಾರೆ ಸರ್ಕಾರ ಗ್ರೇಟರ್ ಬೆಂಗಳೂರು ಬಿಲ್ ತರಲು ನಿಶ್ಚಯ ಮಾಡಿದೆ. ಪರಿಷತ್‌ನಲ್ಲೂ ಬಿಲ್ ಪಾಸ್ ಮಾಡಿಕೊಂಡು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ. ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದೇ ಆದಲ್ಲಿ ಈ ಬಿಲ್ ಜಾರಿ ಫಿಕ್ಸ್ ಆಗಲಿದೆ. ನಂತರ ಪಾಲಿಕೆಗಳ ರಚನೆ, ವಾರ್ಡ್‌ಗಳ ಹೆಚ್ಚಳ, ಹಂಚಿಕೆ, ಸದಸ್ಯರ ಮೀಸಲಾತಿ ನಿಗದಿ ಇತ್ಯಾದಿ ಪ್ರಕ್ರಿಯೆಗಳು ಇನ್ನೂ ಬಾಕಿ ಇದೆ. ಇದೆಲ್ಲವೂ ಮುಗಿದರೆ ಮುಂದಿನ ಸೆಪ್ಟೆಂಬರ್ ಹೊತ್ತಿಗೆ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸುವ ನಿರೀಕ್ಷೆ ಇದೆ.