ತುಮಕೂರು: ಸರ್ಕಾರಿ ಅಧಿಕಾರಿಯೊಬ್ಬರನ್ನ ಸುಮಾರು 6 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ (Digital Arrest) ಮಾಡಿ 19 ಲಕ್ಷ ರೂ. ವಂಚಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಡಿ.20ರಂದು ನಗರದ ಉಪ್ಪಾರಹಳ್ಳಿಯ ಬಿ.ಎಸ್.ನಾಗಭೂಷಣ್ ಎಂಬುವರಿಗೆ ಕರೆ ಮಾಡಿದ ಆರೋಪಿ ಮುಂಬೈ ಸೈಬರ್ ಪೊಲೀಸ್ (Mumbai Cyber Police) ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಖಾತೆ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ನಿಮ್ಮ ಹೆಸರಿನಲ್ಲಿ ಮತ್ತೊಂದು ಸಿಮ್ ಇದ್ದು, ಅದರಿಂದ ಬೇರೆಯವರಿಗೆ ಕಿರುಕುಳ ನೀಡಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ನಿಮ್ಮ ಆಸ್ತಿ ಜಪ್ತಿ ಮಾಡಿ ಬಂಧಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ.
ನಂತರ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಸಮವಸ್ತ್ರ ಧರಿಸಿ ನಿಜವಾದ ಪೊಲೀಸರು ಎಂದು ನಂಬಿಸಿದ್ದಾರೆ. ಈ ವಿಷಯ ಯಾರಿಗೂ ಹೇಳದಂತೆ ಸೂಚಿಸಿದ್ದಾರೆ. ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನಿರಂತರವಾಗಿ ವಿಡಿಯೊ ಕಾಲ್ ಸಂಪರ್ಕ ಕಡಿತವಾಗದಂತೆ ನೋಡಿಕೊಂಡಿದ್ದಾರೆ.
ತನಿಖೆ ನೆಪದಲ್ಲಿ ಬ್ಯಾಂಕ್ ಖಾತೆಯಲ್ಲಿನ ಹಣದ ಬಗ್ಗೆ ವಿಚಾರಿಸಿದ್ದಾರೆ. ನಾಗಭೂಷಣ್ ಪತ್ನಿಯ ಹೆಸರಿನಲ್ಲಿ ಎಫ್‌ಡಿ ಇಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಸದರಿ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾವಣೆ ಮಾಡಬೇಕು. ತನಿಖೆ ಪೂರ್ಣಗೊಂಡ ನಂತರ ಮರಳಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನು ನಂಬಿದ ನಾಗಭೂಷಣ್ 19 ಲಕ್ಷ ಹಣವನ್ನು ಸೈಬರ್ ವಂಚಕರು ತಿಳಿಸಿದ ಖಾತೆಗೆ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಹಣಕಾಸಿನ ಸ್ಥಿತಿಗತಿ ಪರಿಶೀಲಿಸಿ ಅರ್ಧ ಗಂಟೆಯ ನಂತರ ವಾಪಸ್ ಹಾಕುವುದಾಗಿ ಹೇಳಿ ಕರೆ ಕಟ್ ಮಾಡಿದ್ದಾರೆ. ಹಣ ಖಾತೆಗೆ ಬಾರದಿದ್ದರಿಂದ ಅನುಮಾನಗೊಂಡು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.