ಶಿವಮೊಗ್ಗ: ಜಮೀನಿನ ಮಧ್ಯೆ ರಸ್ತೆಗೆಂದು ಬಿಟ್ಟಿದ್ದ ಭೂಮಿಗೆ ಸರ್ಕಾರ ಪರಿಹಾರ ನೀಡಿಲ್ಲ ಎಂದು ಜಮೀನಿನ ಮಾಲೀಕರು ರಸ್ತೆಗೆ ಬೇಲಿ ಹಾಕಿರುವ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗೆಜ್ಜೇನಹಳ್ಳಿ ಗ್ರಾಮದ ರೈತರಾದ ಮಹದೇವ, ಜಯನಾಯ್ಕ ಅವರು ತಮ್ಮ ಜಮೀನು ಸೇರಿದಂತೆ ಗ್ರಾಮದ ಇತರೆ ರೈತರ ಜಮೀನಿಗೆ ತೆರಳಲು ಅನುಕೂಲ ಆಗಲೆಂದು ಕಳೆದ 20 ವರ್ಷಗಳ ಹಿಂದೆ ರಸ್ತೆಗೆ ಭೂಮಿ ಬಿಟ್ಟು ಕೊಟ್ಟಿದ್ದರು. ಆದರೆ ರಸ್ತೆಗೆಂದು ಬಿಟ್ಟಿದ್ದ ಭೂಮಿಗೆ ಸರ್ಕಾರದಿಂದ ಇದುವರೆಗೂ ಯಾವುದೇ ಪರಿಹಾರ ದೊರೆತಿರಲಿಲ್ಲ. ಆದರೆ ಇಂದು ಇದೇ ರಸ್ತೆಯ ಮಾರ್ಗವಾಗಿ ಅಬ್ಬಲಗೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಲು ಲೋಕೋಪಯೋಗಿ ಇಲಾಖೆಯಿಂದ 40 ಲಕ್ಷ ರೂ. ಹಣ ಬಿಡುಗಡೆಯಾಗಿದೆ.
Advertisement
Advertisement
ಇಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಿದ್ದರು. ಈ ವೇಳೆ ಜಮೀನಿನ ಮಾಲೀಕರು ನಮಗೆ ಪರಿಹಾರದ ಹಣ ನೀಡಿ ಕಾಮಗಾರಿ ಆರಂಭಿಸಿ ಎಂದು ತಡೆ ಹಿಡಿದಿದ್ದರು.
Advertisement
ಈ ವೇಳೆ ಗುತ್ತಿಗೆದಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ಮೊದಲು ರಸ್ತೆಗೆ ಹಾಕಿರುವ ಬೇಲಿ ತೆರವುಗೊಳಿಸಿ ನಮಗೆ ಟೆಂಡರ್ ಸಿಕ್ಕಿದೆ ನಾವು ಕೆಲಸ ಆರಂಭಿಸುತ್ತೇವೆ. ನಂತರ ಬೇಕಾದರೆ ನೀವು ಬೇಲಿ ಹಾಕಿಕೊಳ್ಳಿ. ಈಗ ಕಾಮಗಾರಿ ಸ್ಥಗಿತವಾದರೆ ನಾವು ಹಾಕಿರುವ ಬಂಡವಾಳ ನಷ್ಟವಾಗುವುದರ ಜೊತೆಗೆ ಬಂದಿರುವ ಟೆಂಡರ್ ಹಣವು ಸಹ ವಾಪಸ್ ಹೋಗಲಿದೆ. ನಾವು ಕೆಲಸ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
Advertisement
ಪರಿಹಾರದ ಹಣ ನೀಡುವವರೆಗೂ ರಸ್ತೆ ಕಾಮಗಾರಿ ಮಾಡಲು ಬಿಡುವುದಿಲ್ಲ. ನಮ್ಮ ಜಮೀನಿನ ಸ್ಥಳವನ್ನು ಸರ್ಕಾರಕ್ಕಾಗಿ ಬಿಟ್ಟುಕೊಟ್ಟಿದ್ದೇವೆ. ಆದರೆ ಸರ್ಕಾರ ನಮಗೆ ಹೀಗೆ ಪರಿಹಾರ ನೀಡದೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.