ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಬರುವ ನಮ್ಮ ರಾಜ್ಯದ ಕೊನೆಯ ಗ್ರಾಮ ಕೊಂಗಂಡಿ, ಈ ಗ್ರಾಮದಿಂದ ಕೇವಲ ಒಂದು ಕಿಲೋಮೀಟರ್ ಹೋದರೆ ಸಾಕು ತೆಲಂಗಾಣ ರಾಜ್ಯ ಆರಂಭವಾಗುತ್ತದೆ. ಇದು ರಾಜ್ಯದ ಕೊನೆಯ ಗ್ರಾಮ ಅನ್ನೋದಕ್ಕೆ ಏನೋ ನಮ್ಮ ರಾಜ್ಯ ಸರ್ಕಾರ ಹಾಗೂ ಯಾದಗಿರಿ ಜಿಲ್ಲಾಡಳಿತ ಈ ಗ್ರಾಮವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದೆ. ಹೀಗಾಗಿ ಈ ಗ್ರಾಮದಲ್ಲಿ ಅಭಿವೃದ್ಧಿ ಅನ್ನೋದು ಮರಿಚಿಕೆಯಾಗಿದೆ.
Advertisement
ಈ ಗ್ರಾಮ ಯಾದಗಿರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಚುನಾವಣೆಯಲ್ಲಿ ಮತ ಕೇಳಲು ಈ ಗ್ರಾಮಕ್ಕೆ ಬಂದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಗೆದ್ದ ಮೇಲೆ ಇತ್ತ ಕಡೆ ತಲೆ ಹಾಕಿಲ್ಲ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಇದು ಹಳೆ ಕಾಲದ ಕಟ್ಟಡವಾದ್ದರಿಂದ ಯಾವಾಗ ಬೀಳತ್ತೋ ಗೊತ್ತಿಲ್ಲ. ಹೀಗಾಗಿ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಇತ್ತ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಾಮಮಾತ್ರಕ್ಕೆ ನಿರ್ಮಾಣ ಮಾಡಿದ್ದು, ಈ ಘಟಕ ಉದ್ಘಾಟನೆ ಆದಾಗಿಂದ ಇಲ್ಲಿಯತನಕ ಈ ಗ್ರಾಮಸ್ಥರು ಈ ಘಟಕದಿಂದ ಒಂದು ಹನಿ ನೀರು ಕುಡಿದಿಲ್ಲ. ಚರಂಡಿಗಳೆಲ್ಲಾ ತುಂಬಿ ತುಳುಕಿ, ವಾರ್ಡ್‍ಗಳೆಲ್ಲಾ ಗಬ್ಬೆದ್ದು ನಾರುತ್ತಿದ್ದರೂ ಜನರ ಸಮಸ್ಯೆ ಕೇಳೋರೇ ಇಲ್ಲದಂತಾಗಿದೆ. ಇಷ್ಟೇ ಅಲ್ಲದೇ ರಸ್ತೆಗಳಲ್ಲಿ ಮುಳ್ಳು, ಗಿಡ-ಗಂಟಿಗಳು ಬೆಳದ ಕಾರಣ ಈ ಗ್ರಾಮಕ್ಕೆ ಬಸ್ ಬರೋದು ಬಿಟ್ಟು ಎಷ್ಟೋ ವರ್ಷಗಳಾಗಿವೆ. ಇವೆಲ್ಲದರ ವಿದ್ಯುತ್ ಕಣ್ಣಾಮುಚ್ಚಾಲೆಗೆ ಗ್ರಾಮಸ್ಥರು ಮತ್ತು ರೈತರು ಹೈರಾಣಾಗಿದ್ದಾರೆ.
Advertisement
ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ವರ್ಷಕೊಮ್ಮೆ ಇಲ್ಲಿಗೆ ಬಂದರೆ ಹೆಚ್ಚು. ಮತ ಕೇಳೋಕೆ ಬರುವ ರಾಜಕಾರಣಿಗಳು ಮತ್ತೆ ಚುನಾವಣೆ ಬಂದಾಗ ಇತ್ತಕಡೆ ಮುಖ ಹಾಕುತ್ತಾರೆ. ಹೀಗಾಗಿ ಈ ಗ್ರಾಮಸ್ಥರ ಪಾಡು ಹೇಳ ತೀರದಾಗಿದೆ. ಇನ್ನೂ ಜಿಲ್ಲಾಡಳಿತಕ್ಕೆ ಈ ಗ್ರಾಮ ಇದೆ ಅನ್ನೋ ಮಾಹಿತಿ ಇದಿಯೋ? ಇಲ್ಲವೋ? ಎಂದು ಅನುಮಾನ ಮೂಡುವಷ್ಟರ ಮಟ್ಟಿಗೆ ಅಧಿಕಾರಿಗಳು ಜಾಣ ಕುರುಡತನ ತೋರುತ್ತಿದ್ದಾರೆ.