ಬೆಂಗಳೂರು: ಜಾತಿಗಣತಿ ವರದಿ ಬಗ್ಗೆ ಚರ್ಚೆ ಮಾಡಲು ಕೂಡಲೇ ಸರ್ವ ಪಕ್ಷಗಳ ಸಭೆ ಕರೆಯಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯರಿಗೆ ಆಗ್ರಹ ಮಾಡಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜಾತಿಗಣತಿಗೆ (Caste Census) ಜೆಡಿಎಸ್ ವಿರೋಧ ಮಾಡೊಲ್ಲ. ಆದರೆ ಸಮೀಕ್ಷೆ ಮಾಡಿರೋ ವ್ಯವಸ್ಥೆ ಸರಿಯಿಲ್ಲ. ಹೀಗಾಗಿ ವರದಿ ಪುನರ್ ಪರಿಶೀಲನೆ ಆಗಬೇಕು. ಕೂಡಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ವರದಿ ಬಗ್ಗೆ ಚರ್ಚೆ ಮಾಡಬೇಕು. ರಾಜ್ಯದ ಬುದ್ದಿಜೀವಿಗಳ, ಸ್ವಾಮೀಜಿಗಳನ್ನ ಕರೆದು ಚರ್ಚೆ ಮಾಡಬೇಕು. ವರದಿಯನ್ನ ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜನಿವಾರ ಕತ್ತರಿಸಿದ್ದು ಬಹಳ ದೊಡ್ಡ ತಪ್ಪು: ಪರಮೇಶ್ವರ್
ಸುದ್ದಿಗೋಷ್ಠಿ ವೇಳೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಅವರು, ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದ್ರಿ. ಆದರೆ, ರಾಜ್ಯದಲ್ಲಿ ಯಾವ ಸಂದೇಶ ಕೊಡ್ತಿದ್ದೀರಾ ಮಿಸ್ಟರ್ ರಾಹುಲ್ ಗಾಂಧಿ ಅವರೇ. ರಾಹುಲ್ ಗಾಂಧಿ ಅವರೇ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಿದ್ದೀರಾ. ಜನ ಬೀದಿ ಬೀದಿಗಳಲ್ಲಿ ಒಡೆದಾಡಬೇಕಾ? ಇದೇನಾ ನಿಮ್ಮ ಜೋಡೋ ಯಾತ್ರೆ. ಹೇಳ್ತೀನಿ ಕೇಳಿ, ನೀವು ಪಶ್ಚಾತ್ತಾಪ ಯಾತ್ರೆ ಮಾಡೋ ದಿನ ದೂರ ಇಲ್ಲ. ನಿಮ್ಮ ಬೇಳೆ ಬೇಯಿಸೋಕೆ ಸಮಾಜ ಸಮಾಜದ ಮಧ್ಯೆ ವಿಷ ಬೀಜ ಹಿಂಡುತ್ತೀರಾ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿದ ಅವರು, ಈ ಜಾತಿಗಣತಿ ಮೂಲಕ ಏನ್ ಮಾಡೋಕೆ ಹೊರಟ್ಟಿದ್ದೀರಾ ಸಿದ್ದರಾಮಯ್ಯ ಅವರೇ? ಇದು ಜಾತಿಗಣತಿನಾ? ಈಗ ಬಿಡುಗಡೆ ಮಾಡಿರುವ ಬುಕ್ ನೋಡಿದ್ರೆ ಪಾಪ ಸಚಿವರಿಗೂ ಮಾತಾಡೋಕೆ ಆಗೊಲ್ಲ. ಯಾವ ಜಾತಿಯಿಂದ ಯಾರ ಹೊಟ್ಟೆ ತುಂಬೊಲ್ಲ. ಧರ್ಮದ ಬಗ್ಗೆ ಮಾತಾಡಿದ್ರೆ ಹೊಟ್ಟೆ ತುಂಬೊಲ್ಲ. ಬಡವರನ್ನ ಗುರುತಿಸಿ ಸರ್ಕಾರದ ಸೌಲಭ್ಯ ಕೊಡಿ ಅಂತ ಆಗ್ರಹಿಸಿದರು. ಅಬ್ಬಬ್ಬಾ ಅಂದರೆ ನೀವು 3 ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ ಆಗಿರಬಹುದು ಅಷ್ಟೇ. ಮುಂದೆ ಏನ್ ಆಗಬಹುದು ಹೇಳಿ. ಸಿದ್ದರಾಮಯ್ಯ ಅವರೇ ಜನಪರವಾಗಿ ಮಾಡಿರೋ ಸಾಧನೆ ತೋರಿಸಿ. ಎರಡು ವರ್ಷ ಅಯ್ತು ಅಧಿಕಾರಕ್ಕೆ ಬಂದು. ನಿಮ್ಮ ಸಾಧನೆ 16ನೇ ಬಜೆಟ್ ಮಂಡನೆ ಮಾಡಿದೆ. 4 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದು ಅಂತೀರಾ? ಸಾಲ ಮಾಡಿ ದೊಡ್ಡ ಗಾತ್ರದ ಬಜೆಟ್ ಅಂತ ಹೇಳೋಕೆ ನೀವೇ ಬೇಕಾ? ನಿಮ್ಮ ಮಕ್ಕಳು, ನಮ್ಮ ಮಕ್ಕಳು, ಕಾಕಾ ಪಾಟೀಲ್, ಮಹದೇವಪ್ಪನ ಮಕ್ಕಳ ತಲೆ ಮೇಲೆ ಸಾಲ ಇದೆ. ಇದೇನಾ ನಿಮ್ಮ ಸಾಧನೆ ಸಿದ್ದರಾಮಯ್ಯ ಅವರೇ? ಹೇಗೆ ಇತಿಹಾಸ ನಿರ್ಮಾಣ ಮಾಡಿಕೊಳ್ತೀರಾ ನೋಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಕೂರಿಸದ ಪ್ರಕರಣ – ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ FIR
ಸಾಮಾನ್ಯವಾಗಿ ನಾಗರಿಕನಾಗಿ ನಾನು ಸಿಎಂ ಅವರಿಗೆ ಪ್ರಶ್ನೆ ಮಾಡ್ತಿದ್ದೇನೆ. ಜಾತಿಗಣತಿ ವರದಿ ಉದ್ದೇಶ ಏನು? ಇದರ ಹಿಡನ್ ಅಜೆಂಡಾ ಏನು? ಎಷ್ಟು ವ್ಯವಸ್ಥಿತವಾಗಿ ಸಂಚು ಮಾಡಿದ್ದೀರಾ ಸಿದ್ದರಾಮಯ್ಯ ಅವರೇ ಎಂದು ಆಕ್ರೋಶ ಹೊರಹಾಕಿದರು.
ವೈಜ್ಞಾನಿಕವಾಗಿ ಸಮೀಕ್ಷೆ ಮಾಡೋಕೆ ಆಗಿಲ್ಲ ಅಂದರೆ ಹೇಗೆ? ಯಾರೋ ಅಮಾಯಕರ ಕೈಯಲ್ಲಿ ಪೆನ್ನು ಕೊಟ್ಟು ವರದಿ ಬರೆಸಿದ್ದೀರಾ. ಡಿಸಿಎಂ ಡಿಕೆಶಿ ಅವರೇ ಪೆನ್ನು ಪೇಪರ್ ಕೇಳಿದ್ರು ಕೊಟ್ಟಿದ್ದಾರೆ. ನೀವು ಯಾವುದಕ್ಕೆ ಉಪಯೋಗ ಮಾಡ್ತಿದ್ದೀರಾ. ನಿಮ್ಮ ಆತ್ಮಸಾಕ್ಷಿಯನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ. ಬನ್ನಿ ಸಮಾಜದ ಪರವಾಗಿ ಪೆನ್ನು, ಪೇಪರ್ ಇಟ್ಟುಕೊಳ್ಳಿ. ಬನ್ನಿ ಸಮಾಜ ಕಟ್ಟೋಣ. ಕೊಟ್ಟಿರೋ ಪೆನ್ನು ಪೇಪರ್ ಅನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಿ. ಮೊನ್ನೆ ಖಾಲಿ ಸಿಲಿಂಡರ್ ಎತ್ತಿಕೊಂಡು ಪೋಸ್ ಕೊಡ್ತೀರಾ. ಖಾಲಿ ಸಿಲಿಂಡರ್ ಎತ್ತೋಕೆ ನೀವೇ ಬೇಕಾ? ಭಾರವನ್ನ ಜನರ ಮೇಲೆ ಹಾಕಿರೋದು ನೀವು. ಒಳ್ಳೆ ನಟನೆ ಕಣ್ರಿ ನಿಮ್ದು ಎಂದು ವಾಗ್ದಾಳಿ ನಡೆಸಿದರು.