ಬೆಂಗಳೂರು: ಗುರುವಾರವೇ ಮುಖ್ಯಮಂತ್ರಿಯಾಗುತ್ತೇನೆ ಎಂಬ ಉಮೇದಿನಲ್ಲಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವೇಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಡಿವಾಣ ಹಾಕಿದಂತಿದೆ.
ಸ್ಪೀಕರ್ ಹಾಗೂ ಸುಪ್ರೀಂಕೋರ್ಟ್ ಎದುರು ಬಾಕಿ ಇರುವ ಕಾಂಗ್ರೆಸ್ ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಅರ್ಜಿಗಳು ಇತ್ಯರ್ಥ ಆಗುವವರೆಗೆ ಸರ್ಕಾರ ರಚನೆಗೆ ಅವಸರ ಮಾಡಬೇಡಿ ಎಂದು ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
Advertisement
Advertisement
2018ರ ವಿಧಾನಸಭೆ ಚುನಾವಣೆಯಲ್ಲಿ 104 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಅನ್ಯ ಪಕ್ಷದ ಶಾಸಕರನ್ನು ಸೆಳೆದು ಅಥವಾ ಜೆಡಿಎಸ್ ಬೆಂಬಲ ಪಡೆದು ಸಿಎಂ ಆಗಬಹುದು ಎಂಬ ವಿಶ್ವಾಸದಲ್ಲಿದ್ದ ಯಡಿಯೂರಪ್ಪ ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಆದರೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ನಿಂತು ಮೈತ್ರಿ ಸರ್ಕಾರ ರಚಿಸುವ ತಯಾರಿ ನಡೆಸಿದರು. ಇದರಿಂದಾಗಿ ಬಹುಮತ ಸಾಬೀತುಪಡಿಸಲು ಅಸಾಧ್ಯವೆಂದರಿತ ಯಡಿಯೂರಪ್ಪ, ವಿದಾಯ ಭಾಷಣ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಡೆದಿದ್ದರು. ಇದರಿಂದ ಇಡೀ ದೇಶದಲ್ಲಿ ಬಿಜೆಪಿಗೆ ಮುಖಭಂಗವಾಗಿತ್ತು.
Advertisement
ಈ ಕಾರಣಕ್ಕೆ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ಮುಂದಾಗಿದ್ದು, ಅತೃಪ್ತ ಶಾಸಕರ ರಾಜೀನಾಮೆ ಅಂಗಿಕಾರ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಇತ್ತ ಅತೃಪ್ತ ಮೇಲೆ ಬಿಜೆಪಿ ವರಿಷ್ಠರಿಗೆ ನಂಬಿಕೆ ಮೂಡಿಲ್ಲವಂತೆ. ಹೀಗಾಗಿ ಮೈತ್ರಿ ಸರ್ಕಾರ ಬಿದ್ದರೂ ಸರ್ಕಾರ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡಲಿಲ್ಲ. ಸ್ಪೀಕರ್ ನಡೆ ಗಮನಿಸಿಕೊಂಡು ರಾಜ್ಯ ನಾಯಕರಿಗೆ ಸೂಚಿಸಲು ಬಿಜೆಪಿ ಹೈಕಮಾಂಡ್ ನಿರ್ಧಾರಿಸಿದೆ.
Advertisement
ದಿಲ್ಲಿಗೆ ಬಿಎಸ್‍ವೈ ಆಪ್ತ ನಿಯೋಗ:
ದೋಸ್ತಿ ಸರ್ಕಾರ ಪತನಗೊಂಡಾಗಿನಿಂದ ಹೊಸ ಸರ್ಕಾರ ರಚನೆಗೆ ಬಿ.ಎಸ್ ಯಡಿಯೂರಪ್ಪ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ನಾಯಕರು ಮಾತ್ರ ಇಲ್ಲಿಯವರೆಗೂ ಬಿಎಸ್‍ವೈಗೆ ಯಾವುದೇ ಸಂದೇಶ ರವಾನಿಸಿಲ್ಲ. ಇದು ಬಿಎಸ್‍ವೈ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ವರಿಷ್ಠರ ಮನವೊಲಿಕೆಗೆ ಹಾಗೂ ರಾಜ್ಯ ರಾಜಕಾರಣದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಬಿಎಸ್‍ವೈ ತಮ್ಮ ಆಪ್ತ ಬಳಗವನ್ನು ದಿಲ್ಲಿಗೆ ಕಳುಹಿಸಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ಕೆ.ಜಿ ಬೋಪಯ್ಯ, ಬಿ.ವೈ ವಿಜಯೇಂದ್ರ ತಡರಾತ್ರಿಯೇ ದೆಹಲಿಗೆ ಬಂದಿದ್ದಾರೆ. ಈ ಬಿಜೆಪಿ ನಿಯೋಗ ಇವತ್ತು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿ ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸಲಿದೆ. ಒಂದು ವೇಳೆ ಅಮಿತ್ ಶಾ ಭೇಟಿ ಸಾಧ್ಯವಾಗದಿದ್ದರೆ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದೆ.