ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ ಸರ್ಕಾರ ಮಾತನ್ನು ಉಳಿಸಿಕೊಂಡಿದೆ: ಹೆಬ್ಬಾಳ್ಕರ್‌

Public TV
2 Min Read
pratap simha nayak and lakshmi hebbalkar

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ (Anganwadi Workers) ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದ್ದು, ಈ ಬಾರಿಯ ಬಜೆಟ್‌ನಲ್ಲಿ (Budget) ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವ ಮೂಲಕ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ (Pratap Simha Nayak) ಪ್ರಶ್ನೆಗೆ ಸಚಿವರು, ಇತ್ತೀಚಿನ ಮಂಡಿಸಲಾದ 2025-26ನೇ ಸಾಲಿನ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಹಾಗೂ ಅಂಗನವಾಡಿ ಸಹಾಯಕಿಯರಿಗೆ 750 ರೂ. ಹೆಚ್ಚಿಸಲಾಗಿದ್ದು, ಇದರಿಂದ ವರ್ಷಕ್ಕೆ ಇಲಾಖೆಗೆ 144 ಕೋಟಿ ರೂ. ಅನುದಾನ ಹೊರೆಯಾಗಿದೆ ಎಂದರು.

Upgradation of Karnataka Anganwadi centers to Montessori LKG UKG 1

ಅಂಗನವಾಡಿ ಕಾರ್ಯಕರ್ತೆಯವರ ಗೌರವ ಧನವನ್ನು ಹೆಚ್ಚಳ ಮಾಡಿರುವುದು ನಮ್ಮ ಕಾಂಗ್ರೆಸ್‌ ಸರ್ಕಾರವೇ. 2017ರಲ್ಲಿ ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಆಗಿದ್ದ ವೇಳೆಯ 2 ಸಾವಿರ ರೂಪಾಯಿ ಗೌರವ ಧನವನ್ನು ಹೆಚ್ಚಿಸಲಾಗಿತ್ತು. ಆದರೆ ,ಕಳೆದ ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ಒಂದು ರೂಪಾಯಿ ಹೆಚ್ಚಿಸಿರಲಿಲ್ಲ ಎಂದು ಸದನಕ್ಕೆ ತಿಳಿಸಿದರು. ಇದನ್ನೂ ಓದಿ: ಹಾವೇರಿ ಹಿಂದೂ ಯುವತಿ ಹತ್ಯೆ ಕೇಸ್ – ಬಾಡಿಗೆ ಕಾರು ತಂದು ಸ್ವಾತಿ ಕರೆದೊಯ್ದಿದ್ದ ನಯಾಜ್‌!

ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ನೀಡಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದ್ದು, ಇದರಲ್ಲಿ ನಮ್ಮ ರಾಜ್ಯದ ಪಾಲು ಹೆಚ್ಚಿದೆ. ಗೌರವ ಧನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ ಈವರೆಗೂ ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಪರೋಕ್ಷವಾಗಿ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಿರುವ ರಾಜ್ಯಗಳ ಪೈಕಿ ಇಡೀ ದೇಶದಲ್ಲೇ ನಮ್ಮ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರಕ್ಕೆ ಅಂಗನವಾಡಿ ಸಹಾಯಕರು ಹಾಗೂ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇದ್ದು, ಹಾಗಾಗಿಯೇ ಅವರ ಗೌರವ ಧನ ಹೆಚ್ಚಳ ಮಾಡಲು ಸರ್ಕಾರ ಮತ್ತು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

 

Share This Article