– ರೈತರು, ಕುರಿಗಾಹಿಗಳಿಂದ ಅನಿರ್ಧಿಷ್ಟಾವಧಿ ಧರಣಿ
ಬಾಗಲಕೋಟೆ: ಸರ್ಕಾರಕ್ಕೆ ಸೇರಿದ ಗೋಮಾಳದಲ್ಲಿ ಅಕ್ರಮವಾಗಿ ವೈನ್ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲೆಯ ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದ ಕುರಿಗಾಹಿಗಳು ಹಾಗೂ ರೈತರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಬಹು ವರ್ಷಗಳಿಂದ ಗ್ರಾಮದ ಸುತ್ತಮುತ್ತಲಿನ ಜನರು ಗ್ರಾಮದ ಹೊರ ವಲಯದ ಗುಡ್ಡಗಾಡು ಪ್ರದೇಶದಲ್ಲಿನ ಸರ್ಕಾರಿ ಗೋಮಾಳದಲ್ಲಿ ಜಾನುವಾರು, ಕುರಿಗಳನ್ನು ಮೇಯಿಸುತ್ತಿದ್ದರು. ಮೀಸಲಿಟ್ಟ ಪ್ರದೇಶದಲ್ಲಿ ಇದೀಗ ಅಕ್ರಮವಾಗಿ ವೈನ್ ಫ್ಯಾಕ್ಟರಿ ಕಟ್ಟಡ ಆರಂಭವಾಗುತ್ತಿದೆ. 493 ಎಕರೆ ಖರಾಬು ಜಾಗವನ್ನು ಖರೀದಿಸಿರುವ ಖಾಸಗಿ ವ್ಯಕ್ತಿಯೊಬ್ಬರು, ಅಲ್ಲಿ ವೈನ್ ಫ್ಯಾಕ್ಟರಿ ಆರಂಭಿಸಲು ಕಟ್ಟಡ ಕಾಮಗಾರಿ ಆರಂಭಿಸಿದ್ದಾರೆ.
ಇದರಿಂದ ಆ ಭಾಗದ ಸುಮಾರು 25 ಸಾವಿರ ಕುರಿಗಳು, ಹತ್ತುಸಾವಿರ ಜಾನುವಾರುಗಳಿಗೆ ಆಶ್ರಯ ಇಲ್ಲದಂತಾಗಿದೆ. ವೈನ್ ಫ್ಯಾಕ್ಟರಿ ನಿರ್ಮಾಣಕ್ಕೆ ಅನುಮತಿ ನೀಡದಂತೆ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಮನವಿ ನೀಡಿದರೂ, ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಸರ್ಕಾರಕ್ಕೆ ಸಂಬಂಧಿಸಿದ ಖರಬ್ ಜಾಗವನ್ನು ಉಳಿಸಿಕೊಳ್ಳಲು ಕುರಿಗಾಯಿಗಳು ಹಾಗೂ ಆ ಭಾಗದ ರೈತರು ಕೊಣ್ಣೂರು ಗ್ರಾಮದಲ್ಲಿ ಅನಿರ್ಧಿಷ್ಟವಧಿ ಧರಣಿ ಹಮ್ಮಿಕೊಂಡಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ, ನಮಗೆ ನ್ಯಾಯ ಕೊಡೆಸಬೇಕು, ಇಲ್ಲವಾದಲ್ಲಿ ಧರಣಿ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ರೈತರು, ಕುರಿಗಾಹಿಗಳು ಎಚ್ಚರಿಸಿದ್ದಾರೆ.