– 25 ಸಾವಿರ ಘೋಷಿಸಿ ಕೈತೊಳೆದುಕೊಂಡ ಸರ್ಕಾರ
ಬಾಗಲಕೋಟೆ: ನೇಕಾರರು, ರೈತರು ದೇಶದ ಎರಡು ಕಣ್ಣುಗಳು ಎನ್ನುತ್ತಾರೆ. ಕರ್ನಾಟಕದಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ಈ ಎರಡು ವರ್ಗ ಸಾಕಷ್ಟು ಹಾನಿ ಅನುಭವಿಸಿದೆ. ಸರ್ಕಾರ ಈಗಾಗಲೇ ಪ್ರವಾಹ ಪೀಡಿತರಿಗೆ ಪರಿಹಾರ ನೀಡಲು ಒಂದು ಹಂತದಲ್ಲಿ ಕ್ರಮ ಕೈಗೊಳ್ಳುತ್ತಿದೆ. ಆದರೆ ನೇಕಾರರ ಮಗ್ಗಗಳ ಹಾನಿಗೆ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಸಿಎಂ ಹಾಗೂ ಸಚಿವರ ದ್ವಂದ್ವ ಹೇಳಿಕೆಗಳು ನೇಕಾರರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿವೆ.
Advertisement
ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ಮಲಪ್ರಭಾ, ಕೃಷ್ಣಾ ನದಿಗಳ ಆರ್ಭಟಕ್ಕೆ ಮಗ್ಗಗಳು ಜಲಾವೃತವಾಗಿ ಸರ್ವನಾಶವಾಗಿವೆ. ರಬಕವಿ ಬನಹಟ್ಟಿ, ತೇರದಾಳ, ಗುಳೇದಗುಡ್ಡ, ಹುನಗುಂದ, ಇಳಕಲ್ ಭಾಗದಲ್ಲಿ ನೇಕಾರರ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿವೆ. ಸಾಲಸೋಲ ಮಾಡಿ ನಿರ್ಮಿಸಿಕೊಂಡಿದ್ದ ಮಗ್ಗಗಳು ರಾತ್ರೋ ರಾತ್ರಿ ನೀರಿನಲ್ಲಿ ಮುಳುಗಿ ನೇಕಾರರು ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ:ಸಿಎಂ ಆದೇಶವನ್ನೇ ತಿದ್ದುಪಡಿ ಮಾಡಿದ ಕಂದಾಯ ಇಲಾಖೆ- ನೇಕಾರರು ಗರಂ
Advertisement
Advertisement
ಬಾಗಲಕೋಟೆ ಜಿಲ್ಲೆಯ 270 ಮಗ್ಗಗಳು ಹಾನಿಗೊಳಗಾಗಿವೆ. ಆದ್ರೆ 240 ಮಗ್ಗಗಳನ್ನು ಮಾತ್ರ ಫಲಾನುಭವಕ್ಕೆ ಸರ್ಕಾರ ಆಯ್ಕೆ ಮಾಡಿದೆ. ಉಳಿದ 30 ಮಗ್ಗಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗೆಯೇ ಸರ್ಕಾರ ಪ್ರತಿ ಕುಟುಂಬಕ್ಕೆ 25 ಸಾವಿರ ಪರಿಹಾರ ಘೋಷಿಸಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಗ್ಗಗಳನ್ನು ಕಳೆದುಕೊಂಡ ನೇಕಾರರು ಅಸಮಾಧಾನ ಹೊರಹಾಕಿದ್ದಾರೆ. ಒಂದು ಕುಟುಂಬದಲ್ಲಿ 2-3 ಮಗ್ಗಗಳಿರುವ ವಿಚಾರವನ್ನೂ ನಿರ್ಲಕ್ಷಿಸಲಾಗಿದೆ. ಪ್ರತಿ ಕುಟುಂಬದ ಬದಲು ಪ್ರತಿ ಮಗ್ಗ ಎಂದು ಪರಿಗಣಿಸಿ ಸರ್ಕಾರ ಪರಿಹಾರಧನ ಆದೇಶ ಮರುಪರಿಶೀಲನೆ ಮಾಡಬೇಕು ಎಂದು ನೇಕಾರರು ಆಗ್ರಹಿಸಿದ್ದಾರೆ.
Advertisement
ಬಾಗಲಕೋಟೆ ನೇಕಾರರ ಕುಟುಂಬ ಹೆಚ್ಚು ಇರುವ ಜಿಲ್ಲೆಯಾಗಿದೆ. ಇದೇ ನೇಕಾರರಿಂದ ಪ್ರಸಿದ್ಧ ಇಳಕಲ್ ಸೀರೆ ತಯಾರಾಗುತ್ತದೆ. ಆದರೆ ಭೀಕರ ಪ್ರವಾಹ ನೇಕಾರರ ಜೀವನಕ್ಕೆ ಕಲ್ಲು ಹಾಕಿದೆ. ಈ ಬಗ್ಗೆ ಡಿಸಿಎಂ ಹಾಗೂ ಬಾಗಲಕೋಟೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನು ಕೇಳಿದರೆ, ಮರುಪರಿಶೀಲನೆ ಮಾಡ್ತೇವೆ ಎಂದಿದ್ದಾರೆ.