ಗದಗ: ರೈತರ ಹೋರಾಟಕ್ಕೆ ಮಣಿದ ಸರ್ಕಾರ ಮೆಕ್ಕೆಜೋಳ (Maize) ಖರೀದಿಸಲು ರಾತ್ರಿ ಒಪ್ಪಿಗೆ ನೀಡಿದೆ. ಹೋರಾಟ (Farmers Protest) ತೀವ್ರಗೊಳ್ಳುತ್ತಿದ್ದಂತೆ ರಾತ್ರಿ ಪ್ರತಿಭಟನಾ ವೇದಿಕೆಗೆ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್, ಎಡಿಸಿ ದುರಗೇಶ್, ಎಸಿ ಗಂಗಪ್ಪ, ಎಸ್ಪಿ ರೋಹನ್ ಜಗದೀಶ್, ತಹಶಿಲ್ದಾರ ಧನಂಜಯ್ ಮಾಲಗಿತ್ತಿ ಆಗಮಿಸಿದ ರೈತರ ಜೊತೆ ಸಂಧಾನ ಮಾತುಕತೆ ನಡೆಸಿದರು.
ರೈತರ ಮನವೊಲಿಸಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಖರೀದಿ ಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದರು. ವೇದಿಕೆಯಲ್ಲಿ 5 ಜನ ರೈತರ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿ ಸಾಂಕೇತಿಕ ಚಾಲನೆ ನೀಡಿದರು.
ಶ್ರೀಗಳು, ರೈತರು ಸಮ್ಮುಖದಲ್ಲಿ ಅಧಿಕೃತವಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಸರ್ಕಾರದ ನಿರ್ಧಾರಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಳೆದ 18 ದಿನಗಳಿಂದ ನಡೆಯಿತ್ತಿದ್ದ ಪ್ರತಿಭಟನೆ ಇಂದು ತೀವ್ರಗೊಂಡಿತ್ತು. ರೈತರು ಚಕ್ರಗಳನ್ನು ಸುಟ್ಟು ರಸ್ತೆಯನ್ನು ಕೆಲ ಕಾಲ ಬಂದ್ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಗವಿಮಠದ ಕುಮಾರ ಮಹಾರಾಜ್ ಸ್ವಾಮಿಜಿ ಅಸ್ವಸ್ಥರಾಗಿದ್ದರು. ನನ್ನ ಪ್ರಾಣ ಹೋದರೂ ಪರವಾಗಿಲ್ಲ ಹೋರಾಟ ವೇದಿಕೆಯಿಂದ ಕದಲುವುದಿಲ್ಲ. ರೈತರಿಗೆ ನ್ಯಾಯ ಸಿಗುವವರೆಗೆ ವೇದಿಕೆಯಿಂದ ತೆರಳುವುದಿಲ್ಲ. ಚಿಕಿತ್ಸೆ ಸಹ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

