10 ಗಂಟೆಗೆ ಕಚೇರಿಗೆ ಬರೋಕ್ಕಾಗಲ್ಲ- ಸರ್ಕಾರಿ ನೌಕರರಿಂದ ಪತ್ರ

Public TV
2 Min Read
GOVT EMPLOYEES
ಸಾಂದರ್ಭಿಕ ಚಿತ್ರ

– ಖಾಸಗಿ ಸಂಸ್ಥೆಯಲ್ಲಿ 10 ಗಂಟೆ ಕೆಲಸ
– 10 ನಿಮಿಷ ತಡವಾದ್ರೂ ಅರ್ಧ ದಿನದ ಸಂಬಳ ಕಟ್

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ದಿನಕ್ಕೆ 10 ಗಂಟೆ ಕೆಲಸ ಮಾಡಬೇಕಾಗಿದೆ. ಒಂದು ವೇಳೆ 10 ನಿಮಿಷ ತಡವಾಗಿ ಹೋದರೆ ಅರ್ಧ ದಿನದ ಸ್ಯಾಲರಿ ಕಟ್ ಮಾಡಲಾಗುತ್ತದೆ. ಹಾಗಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಕಚೇರಿ ಸಮಯ 9.00ಕ್ಕೆ ಇದ್ದರೂ 8.30ಕ್ಕೆ ಹೋಗುತ್ತಾರೆ. ಆದರೆ ಸರ್ಕಾರಿ ನೌಕರರ ಸ್ಥಿತಿ ಹಾಗಲ್ಲ ಸಕಲ ಸವಲತ್ತು ಇರುವ ವಿಧಾನಸೌದಕ್ಕೆ ಸರಿಯಾದ ಸಮಯಕ್ಕೆ ಬರಲು ಸಾದ್ಯವೇ ಇಲ್ಲ ಎಂದು ಪತ್ರ ಬರೆದಿದ್ದಾರೆ.

ನಮಗೆ 10 ಗಂಟೆಗೆ ಕಚೇರಿಗೆ ಬರಲು ಸಾಧ್ಯವೇ ಇಲ್ಲ ದಯವಿಟ್ಟು ರಿಯಾಯಿತಿ ಕೊಡಿ ಪ್ಲೀಸ್ ಎಂದು ಸರ್ಕಾರಿ ನೌಕರರು ಪತ್ರ ಬರೆಯುವ ಮೂಲಕ ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ದಿನಕ್ಕೆ 7.30 ಗಂಟೆ ಕೆಲಸ ಮಾಡಿ ನೌಕರರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿಯಿಂದ ನೆಮ್ಮದಿ ಹಾಳಾಗಿದೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಚೇರಿಗೆ ಬರುವುದು ದೊಡ್ಡ ಸವಾಲಾಗಿದೆ. ಈ ಎಲ್ಲ ಕಾರಣಗಳಿಂದ ನಮಗೆ ಕಚೇರಿಗೆ 10.10ರೊಳಗೆ ಬರಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸಮಯವನ್ನು ಚೇಂಜ್ ಮಾಡಿ ಎಂದು ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘದಿಂದ ಪತ್ರ ಬರೆಯಲಾಗಿದೆ.

vlcsnap 2018 06 14 07h30m48s163

ಪತ್ರದಲ್ಲಿ ಏನಿದೆ?
ಸರ್ಕಾರದ ಕಚೇರಿ ವೇಳೆ ಬೆಳಗ್ಗೆ 10.00ರಿಂದ ಸಂಜೆ 5.30 ಗಂಟೆಯಾಗಿದ್ದು, ನೌಕರರು ದಿನದಲ್ಲಿ 7.30 ಗಂಟೆ ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಸಚಿವಾಲಯವು ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿದ್ದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ರಸ್ತೆ ಸಂಚಾರದ ದಟ್ಟಣೆಯು ಹೆಚ್ಚಾಗುತ್ತಿದೆ. ಹೀಗಾಗಿ ಕಚೇರಿ ಆರಂಭದ ವೇಳೆಗೆ ವಿಧಾನಸೌಧಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ನೌಕರರು ಹೆಚ್ಚಿನ ಒತ್ತಡಕ್ಕೆ ಒಳಗಾಗಿ ಅವರುಗಳ ಆರೋಗ್ಯ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ನೌಕರರು ಹಾಜರಾತಿಯನ್ನ ದಾಖಲಿಸುವ ಬಯೋಮೆಟ್ರಿಕ್ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೆ ಅಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಕೆಲವೊಮ್ಮೆ ಬಯೋಮೆಟ್ರಿಕ್ ಯಂತ್ರಗಳು ಸ್ಥಗಿತಗೊಂಡಿರುವುದು ಅಥವಾ ಹಾಜರಾತಿ ದಾಖಲಿಸಿದರೂ ಮಿಸ್‍ಫ್ಲ್ಯಾಷ್ ತೋರಿಸುವುದು ಕಂಡುಬರುತ್ತಿದೆ. ಬೆಂಗಳೂರಿನ ನಗರದ ವಿವಿಧ ಭಾಗಗಳಲ್ಲಿ ಕಾಮಗಾರಿ, ಮೇಲ್ ಸೇತುವೆಗಳು ಸೇರಿದಂತೆ ಹಲವಾರು ಕಾಮಗಾರಿಗಳಿಂದ ರಸ್ತೆ ಸಂಚಾರಿ ದಟ್ಟಣೆಯು ಗಣನೀಯವಾಗಿ ಹೆಚ್ಚಳವಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ಕಚೇರಿಗೆ ತಲುಪುವುದು ಸವಾಲಿನ ಕೆಲಸವಾಗಿದೆ.

traffic jam

ಈ ಮೇಲಿನ ಅಂಶಗಳನ್ನು ಪರಿಗಣಿಸಿ ಬೆಳಿಗ್ಗೆ 10.00 ರಿಂದ 10.30ರೊಳಗೆ ನೌಕರರು ಕಚೇರಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಆಗ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಾರೆ. ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒತ್ತಡದಲ್ಲಿ ಜೀವನ ನಡೆಸುತ್ತಿರುವ ನೌಕರರು ಸರ್ಕಾರಿ ಸೇವೆಯನ್ನು ಒತ್ತಡರಹಿತವಾಗಿ ಸಲ್ಲಿಸುವಂತೆ ಅನುವು ಮಾಡಿಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *