ನವದೆಹಲಿ: ಜಾತ್ಯತೀತ ಮತ್ತು ಸಂವಿಧಾನ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಆಗ್ರಹಿಸಿವೆ.
ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಮಾತನಾಡಿ, ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ ಅವರು ಸಂಸತ್ತಿನಲ್ಲಿ ಇರಲು ಯಾವುದೇ ಹಕ್ಕಿಲ್ಲ ಎಂದು ಹೇಳಿದರು. ಇದೇ ವೇಳೆ ಚಯರ್‍ಮನ್ ಆಗಿರುವ ವೆಂಕಯ್ಯ ನಾಯ್ಡು ಅವರ ಮುಂಭಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅನಂತ್ ಕುಮಾರ್ ಹೆಗ್ಡೆ ಅವಮಾನ ಮಾಡಿದ್ದಾರೆ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.
Advertisement
Advertisement
ಪ್ರತಿಪಕ್ಷಗಳ ಪ್ರತಿಭಟನೆಯಿಂದ ಲೋಕಸಭಾ ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ವಿಜಯ್ ಗೋಯಲ್ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಸರ್ಕಾರದ ಹೇಳಿಕೆಯಲ್ಲ ಎಂದು ಸಮಜಾಯಿಷಿ ನೀಡಿದರು.
Advertisement
ಸಾಧಾರಣವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರದ ಲೋಕಸಭಾ ಕಲಾಪಕ್ಕೆ ಹಾಜರಾಗುತ್ತಿರುತ್ತಾರೆ. ಆದರೆ ಇಂದು ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಗೈರಾಗಿದ್ದರು.
Advertisement
ಹೆಗ್ಡೆ ಹೇಳಿದ್ದು ಏನು?
ಕೊಪ್ಪಳದ ಯಲಬುರ್ಗಾ ತಾಲೂಕಿನ ಕೊಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ, ಇತ್ತೀಚೆಗೆ ಹೊಸದೊಂದು ಸಂಪ್ರದಾಯ ಬಂದುಬಿಟ್ಟಿದೆ. ಅದ್ಯಾವುದೆಂದರೆ ಜಾತ್ಯತೀತರು. ನಾನೊಬ್ಬ ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ, ಲಿಂಗಾಯತ ಅಂತಾ ಯಾರದ್ರೂ ತಮ್ಮ ಧರ್ಮವನ್ನು ಹೆಮ್ಮೆಯಿಂದ ಹೇಳಿಕೊಂಡರೆ ನನಗೆ ಖುಷಿ ಅನಿಸುತ್ತೆ. ಯಾಕಂದ್ರೆ ಅವರಿಗೆ ಅವರ ರಕ್ತದ ಅರಿವಿದೆ ಎಂದರ್ಥ. ಆದ್ರೆ ಈ ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಅಲ್ವ. ಅಂಥವರು ಅಪ್ಪ-ಅಮ್ಮನ ಗುರುತು ಇಲ್ಲದೇ ಇರುವ ರಕ್ತವನ್ನು ಹೊಂದಿರುವವರು ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದರು.
ಜಾತ್ಯತೀತರಿಗೆ ತಮ್ಮ ಗುರುತೇ ತಮಗಿರುವುದಿಲ್ಲ. ಮಾತು ಎತ್ತಿದ್ರೆ ದೊಡ್ಡ ವಿಚಾರವಾದಿಗಳು. ಅಪ್ಪ-ಅಮ್ಮನ ಪರಿಚಯ ಇಲ್ಲದೇ ಇರೋ ಇವರುಗಳು ದೊಡ್ಡ ವಿಚಾರವಾದಿಗಳು. ಇವರನ್ನು ಜಾತಿಯ ಜೊತೆ ಕೂರಿಸಿಕೊಳ್ಳುತ್ತಿರೋ ಅಥವಾ ನಿಮ್ಮ ಕುಲದ ಜೊತೆ ಕೂರಿಸಿಕೊಳ್ಳುತ್ತಿರೋ ಗುರುತಿಸಿಕೊಳ್ಳಿ ಸ್ವಾಮಿ. ನಿಮಗೆ ನಿಮ್ಮ ರಕ್ತದ ಪರಿಚಯ ಇದ್ದಿದ್ದೇ ಆದ್ರೆ ನಿಮ್ಮ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದ್ರೆ ಜಾತ್ಯತೀತರು ಅಂತ ಹೇಳಿದ್ರೆ ಮಾತ್ರ ಸ್ವಲ್ಪ ನೀವು ಯಾರು ಅಂತ ಸಂಶಯ ಬರುತ್ತೆ ಅಂತ ಹೇಳಿದ್ದರು. ಇದನ್ನೂ ಓದಿ: ಕೌಶಲ್ಯಾಭಿವೃದ್ಧಿ ಸಚಿವಾಲಯ ನೀರಿಲ್ಲದ ಬಾವಿ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ
ಹೌದು. ಸಂವಿಧಾನ ಜಾತ್ಯತೀತರು ಅಂತ ಹೇಳಿದೆ. ನಾವು ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದ್ರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಅದೆಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಬದಲಾಗುತ್ತೆ. ನಿಮಗೆ ಸಂಪ್ರದಾಯ, ಪರಂಪರೆ, ಸಂಸ್ಕೃತಿ ಇದರ ಐತಿಹಾಸಿಕ ಹೆಜ್ಜೆಯ ಗುರುತುಗಳೇ ನಿಮಗೆ ಗೊತ್ತಿಲ್ಲ. ನೀವು ಮೂರ್ಖರು. ಜಗತ್ತಿನ ಭೂಪಟಗಳು, ಸಾಮಾಜಿಕ ಚಿತ್ರಣ ಬದಲಾಗಿ ಹೋಗಿದೆ. ಹೀಗಾಗಿ ನಾವು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಯಾರಿಗೆ ಸಭ್ಯತೆಯ ಅರಿವಿದೆ ಅಂತವರು ಸಂಸ್ಕಾರ ಎಂಬ ಶಬ್ಧವನ್ನು ಒಪ್ಪಿಕೊಳ್ಳಲೇ ಬೇಕು. ಆದ್ರೆ ಯಾರಿಗೆ ಈ ಶಬ್ಧ ಪರಿಚಯ ಇಲ್ಲವೋ ಅಥವಾ ಒಳ್ಳೆದು ಮತ್ತು ಕೆಟ್ಟದರ ಮಧ್ಯೆ ಇರೋ ಕಂದಕ ಗೊತ್ತಿಲ್ಲವೋ ಅಂತವರು ಶಿಕ್ಷಣವೇ ಸಂಸ್ಕಾರ ಅಂದುಕೊಂಡಿರುತ್ತಾರೆ. ಅಂತಹ ಮೂಢಮತಿಗಳ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಹೇಳಿದ್ದರು.