ಬೆಂಗಳೂರು: ಚುನಾವಣೆ (Election) ಸಮೀಪಿಸುತ್ತಿರುವ ಈ ಹೊತ್ತಲ್ಲಿ ವೇತನ (Salary) ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಆರಂಭಿಸಿದ್ದ ಮುಷ್ಕರಕ್ಕೆ (Strike) ಬೆಚ್ಚಿದ ರಾಜ್ಯ ಸರ್ಕಾರ ಮಧ್ಯಾಹ್ನ ಮಧ್ಯಂತರ ಪರಿಹಾರ ಕಂಡುಕೊಂಡಿದೆ. ಸರ್ಕಾರ ತನ್ನ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ನೌಕರರು ಮುಷ್ಕರ ಕೈಬಿಟ್ಟಿದ್ದಾರೆ.
ಸಿಎಂ ಬೊಮ್ಮಾಯಿ (CM Bommai) ಜೊತೆಗಿನ ಹಲವು ಸುತ್ತುಗಳ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ನಮ್ಮ ಹೋರಾಟ ಯಶಸ್ವಿಯಾಗಿದೆ. ಸರ್ಕಾರಕ್ಕೆ ಧನ್ಯವಾದ ಎಂದು ತಿಳಿಸಿದರು. ಏಳನೇ ವೇತನ ಆಯೋಗ ಇನ್ನೂ ವರದಿ ನೀಡಿಲ್ಲ. ಹೀಗಾಗಿ ಅಂತಿಮ ವರದಿಯನ್ನು ಕಾಯ್ದಿರಿಸಿರುವ ರಾಜ್ಯ ಸರ್ಕಾರ, ನೌಕರರಿಗೆ ಮಧ್ಯಂತರ ಪರಿಹಾರದ ರೂಪವಾಗಿ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ. ಜೊತೆಗೆ ಹಲವು ಷರತ್ತುಗಳನ್ನೂ ವಿಧಿಸಿದೆ.
Advertisement
Advertisement
ಷರತ್ತುಗಳು ಅನ್ವಯ
ಈ ವರ್ಷದ ಏಪ್ರಿಲ್ 1 ರಿಂದ ಮೂಲ ವೇತನದಲ್ಲಿ ಶೇ.17ರಷ್ಟು ಹೆಚ್ಚಳವಾಗಲಿದೆ. 2018ರ ಪರಿಷ್ಕೃತ ವೇತನ ಶ್ರೇಣಿ ಆಧರಿಸಿ ಮಧ್ಯಂತರ ಪರಿಹಾರ ಸಿಗಲಿದೆ.
Advertisement
ಇದು ತಾತ್ಕಾಲಿಕ ಪರಿಹಾರ ಮೊತ್ತವಾಗಿದೆ. ಇದು ವಿಶಿಷ್ಟ ಸಂಭಾವನೆಯಾಗಿದ್ದು ನಿವೃತ್ತಿ ಸೌಲಭ್ಯ/ತುಟ್ಟಿ ಭತ್ಯೆ ನಿರ್ಧರಿಸುವಾಗ ಇದನ್ನು ಪರಿಗಣಿಸಲ್ಲ. ಮೂಲ ವೇತನಕ್ಕೆ ಬೇರೆ ಯಾವುದೇ ಉಪಲಬ್ಧ ಸೇರಿಸುವುದಿಲ್ಲ. ರಾಜ್ಯ ಸರ್ಕಾರಿ, ಸ್ಥಳೀಯ ಸಂಸ್ಥೆ, ಅನುದಾನಿತ ಶಿಕ್ಷಣ ಸಂಸ್ಥೆ, ವಿವಿಗಳ ಬೋಧಕೇತರ ಸಿಬ್ಬಂದಿಗೆ ಅನ್ವಯವಾಗಲಿದೆ.
Advertisement
ರಾಜ್ಯ ಸರ್ಕಾರದ ನಿವೃತ್ತ ನೌಕರರು/ಕುಟುಂಬ ನಿವೃತ್ತಿದಾರರಿಗೆ ಮೂಲ ನಿವೃತ್ತಿ ವೇತನದಲ್ಲಿ ಶೇ.17ರಷ್ಟು ಹೆಚ್ಚಳವಾಗಲಿದೆ. ಯುಜಿಸಿ/ಎಐಸಿಟಿಇ/ಎನ್‍ಜೆಪಿಸಿ ವೇತನ ಶ್ರೇಣಿಯ ನೌಕರರಿಗೆ ಈ ವೇತನ ಹೆಚ್ಚಳ ಅನ್ವಯವಾಗುವುದಿಲ್ಲ.
ವೇತನ ಹೆಚ್ಚಳ – ಮುಂದೇನು?
ಶೇ.17ರಷ್ಟು ಸಂಬಳ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ 12 ಸಾವಿರ ಕೋಟಿ ರೂ. ಹೊರೆಯಾಗಲಿದೆ. 7ನೇ ವೇತನ ಆಯೋಗದ ಪೂರ್ಣ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗಬೇಕು. ಈಗ ಮಧ್ಯಂತರ ಪರಿಹಾರದ ಕಾರಣ ಪೂರ್ಣ ವರದಿ ಸಲ್ಲಿಕೆಗೆ ಕಾಲಾವಕಾಶ ಸಿಗಲಿದೆ. ಹೊಸ ಸರ್ಕಾರ ಬಂದ ಮೇಲೆಯೇ 7ನೇ ವೇತನ ಆಯೋಗದ ವರದಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಆ ಬಳಿಕವೇ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗಬಹುದು. ಅಲ್ಲಿಯವರೆಗೂ ತಾತ್ಕಾಲಿಕ ಪರಿಹಾರದ ಮೊತ್ತವು ವಿಶಿಷ್ಠ ಸಂಭಾವನೆಯಾಗಿರುತ್ತದೆ. ಮಾರ್ಚ್‍ನಲ್ಲಿ ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಒಂದು ರೂಪಾಯಿಯಲ್ಲಿ ಯಾವುದಕ್ಕೆ ಎಷ್ಟು ಪೈಸೆ ಖರ್ಚು?
ಸರ್ಕಾರದ ಖರ್ಚು ವೆಚ್ಚ ಯಾವುದಕ್ಕೆ ಎಷ್ಟೆಷ್ಟು?
ಸಾಲ ತೀರಿಸಲು – 19 ಪೈಸೆ
ನೌಕರರ ಸಂಬಳ/ ಪಿಂಚಣಿ – 18 ಪೈಸೆ
ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ – 17 ಪೈಸೆ
ಇತರೆ ಆರ್ಥಿಕ ಸೇವೆ – 15 ಪೈಸೆ
ಶಿಕ್ಷಣ – 11 ಪೈಸೆ
ಸಮಾಜ ಕಲ್ಯಾಣ – 8 ಪೈಸೆ
ಆರೋಗ್ಯ – 5 ಪೈಸೆ
ನೀರು ಪೂರೈಕೆ, ನೈರ್ಮಲ್ಯ – 3 ಪೈಸೆ
ಇತರೆ ಸಾಮಾಜಿಕ ಸೇವೆ – 4 ಪೈಸೆ
ಬಜೆಟ್; ಸರ್ಕಾರದ ಖರ್ಚು ವೆಚ್ಚ
ಯೋಜನೇತರ ಅಂದಾಜು ವೆಚ್ಚ
ವೇತನ – 68,491 ಕೋಟಿ ರೂ.
ಪಿಂಚಣಿ – 26,980 ಕೋಟಿ ರೂ.
ಬಡ್ಡಿ – 34,023 ಕೋಟಿ ರೂ.
ಆಡಳಿತ ವೆಚ್ಚ – 5,382 ಕೋಟಿ ರೂ.
ವೇತನ, ಪಿಂಚಣಿ, ಬಡ್ಡಿಗೆ 1,34,875 ಕೋಟಿ ರೂ.
ಮಧ್ಯಂತರ ಪರಿಹಾರದಿಂದ ವೆಚ್ಚ ಹೇಗೆ ಬದಲಾಗುತ್ತೆ?
7ನೇ ವೇತನ ಆಯೋಗದ ವರದಿ ಜಾರಿಗೆ 12 ಸಾವಿರದಿಂದ 18 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಶೇ.17ರಷ್ಟು ಮಧ್ಯಂತರ ಪರಿಹಾರದಿಂದಾಗಿ ಅಂದಾಜು 12 ಸಾವಿರ ಕೋಟಿ ಅವಶ್ಯಕತೆಯಿದೆ. ಹೆಚ್ಚುವರಿ ವೇತನ, ಪಿಂಚಣಿಗಾಗಿ ಬಜೆಟ್‍ನಲ್ಲಿ 6ಸಾವಿರ ಕೋಟಿ ರೂ. ಈಗಾಗಲೇ ಇಡಲಾಗಿದೆ. ಉಳಿದ 6 ಸಾವಿರ ಕೋಟಿ ರೂ. ಈಗ ಇತರೆ ಹಂಚಿಕೆಗಳಲ್ಲಿ ಮರು ಹೊಂದಾಣಿಕೆ ಮಾಡಬೇಕಿದೆ. ಸರ್ಕಾರಿ ನೌಕರರ ಸಂಬಳ ಪಿಂಚಣಿಗೆ ಇಟ್ಟಿದ್ದ 18 ಪೈಸೆಗೆ ಈಗ ಹೆಚ್ಚುವರಿ 2 ಪೈಸೆ ಅಗತ್ಯವಿದೆ. ಒಟ್ಟಾರೆ ಮಧ್ಯಂತರ ಪರಿಹಾರದಿಂದ ಸರ್ಕಾರಿ ನೌಕರರ ಸಂಬಳ/ಪಿಂಚಣಿಗೆ ಒಟ್ಟು 20 ಪೈಸೆ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.