– ಕನಕಪುರಕ್ಕೆ ಸದ್ಯಕ್ಕೆ ಮೆಡಿಕಲ್ ಕಾಲೇಜಿಲ್ಲ
ಮೈಸೂರು: ರಾಜ್ಯದಲ್ಲಿ ಬಾಂಬ್ ಪತ್ತೆಯಂತಹ ಪ್ರಕರಣಗಳಿಗೆ ಹಿಂದಿನ ಸರ್ಕಾರಗಳೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟ ಪರಿಣಾಮ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಡಿಸಿಎಂ, ಹಿಂದಿನ ಸರ್ಕಾರ ಸಮಾಜಘಾತುಕ ಕೆಲಸ ಮಾಡುತ್ತಿದ್ದವರ ಮೇಲಿನ ಕೇಸ್‍ಗಳನ್ನ ವಾಪಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಅವರೆಲ್ಲಾ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರು.
Advertisement
Advertisement
ನಮ್ಮ ಸರ್ಕಾರ ಎಲ್ಲವನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡಿದೆ. ಆದಷ್ಟು ಘಟನೆಗಳು ನಡೆಯುವ ಮುನ್ನವೇ ತಡೆಹಿಡಿಯಲಾಗಿದೆ. ಬಾಂಬ್ ತಯಾರಿಕೆಯ ಕೆಲ ವಸ್ತುಗಳು ಕಾರ್ಖಾನೆ ಉಪಯೋಗಕ್ಕೆ ಸಿಗುತ್ತೆ. ಅವುಗಳನ್ನ ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ. ಇಂತಹ ವಸ್ತುಗಳನ್ನು ಅವರ ಕೈಗೆ ಸಿಗದಂತೆ ನೋಡಿಕೊಳ್ಳುತ್ತೇವೆ ಎಂದರು.
Advertisement
ಸದ್ಯಕ್ಕೆ ಕನಕಪುರಕ್ಕೆ ಮೆಡಿಕಲ್ ಕಾಲೇಜಿಲ್ಲ ಎಂದು ಅಶ್ವಥ್ ನಾರಾಯಣ್ ಪರೋಕ್ಷವಾಗಿ ಹೇಳಿದ್ದಾರೆ. ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಾಡುತ್ತಿದ್ದೇವೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಜೊತೆ ಹೆಲ್ತಿ ಸಿಟಿ ಮಾಡಲಾಗುತ್ತೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತಿರುವುದರಿಂದ ತಾಲೂಕು ಕೇಂದ್ರದಲ್ಲಿ ಮೆಡಿಕಲ್ ಕಾಲೇಜಿನ ಅಗತ್ಯ ಇರಲ್ಲ ಎಂದರು. ರಾಜ್ಯದಲ್ಲಿ ಮಂಜೂರಾಗಿರುವ ನಾಲ್ಕು ಮೆಡಿಕಲ್ ಕಾಲೇಜಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.