ಚೆನ್ನೈ: ಮೂಢನಂಬಿಕೆ ಅಥವಾ ಅವೈಜ್ಞಾನಿಕ ಸಾರ್ವಜನಿಕರ ಭೀತಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ (Madras Highcourt) ಆದೇಶ ನೀಡಿದೆ. ಮೂರ್ತಿಗಳನ್ನು ಖಾಸಗಿಯಾಗಿ ಪೂಜಿಸುತ್ತಿದ್ದರೆ ಅದಕ್ಕೆ ಇತರರು ಅಡ್ಡಿಪಡಿಸಲು ಸಾಧ್ಯವಿಲ್ಲ. ಅಂತೆಯೇ ಇಂತಹ ಕೃತ್ಯಗಳ ವಿರುದ್ಧ ಇರುವ ಸಾರ್ವಜನಿಕರ ಮೌಢ್ಯಕ್ಕೆ ಸರ್ಕಾರ ತಲೆಬಾಗುವಂತಿಲ್ಲ ಎಂದು ನ್ಯಾ.ಡಿ ಭರತ ಚಕ್ರವರ್ತಿ ಆದೇಶಿಸಿದರು.
ಚೆನ್ನೈನ ಮನೆಯೊಂದರಲ್ಲಿ ಪೂಜಿಸಲಾಗುತ್ತಿದ್ದ ಹಿಂದೂ ದೇವರ ಮೂರ್ತಿಗೂ ಆ ಪ್ರದೇಶದಲ್ಲಿ ಉಂಟಾದ ಅಸ್ವಾಭಾವಿಕ ಸಾವಿಗೂ ನಂಟು ಇದೆ ಎಂದು ಸ್ಥಳೀಯರು ಆರೋಪಿಸಿದ್ದ ಹಿನ್ನೆಲೆ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮೂರ್ತಿ ತೆರವುಗೊಳಿಸಿದ್ದ ಪ್ರಕರಣ ವಿಚಾರದಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ.ಇದನ್ನೂ ಓದಿ: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ಯುವಕನ ಕೊಲೆ – ವಿಧವೆ ಮೇಲೆ ಅತ್ಯಾಚಾರ, ಕೂದಲು ಕತ್ತರಿಸಿ ಕ್ರೌರ್ಯ ಮೆರೆದ ದುಷ್ಕರ್ಮಿಗಳು
ಒಬ್ಬ ವ್ಯಕ್ತಿ ತನ್ನ ಸ್ವಂತ ಆವರಣದಲ್ಲಿ ಯಾವುದೇ ಮೂರ್ತಿಯನ್ನು ಇಟ್ಟುಕೊಂಡು ಸ್ವತಃ ಶಾಂತವಾಗಿ ಪೂಜೆ ಮಾಡಲು ಅಥವಾ ಇಚ್ಛೆಯಿರುವ ಸ್ನೇಹಿತರು ಅಥವಾ ನೆರೆಹೊರೆಯವರನ್ನು ಆಹ್ವಾನಿಸಿ ಪೂಜೆ ಮಾಡಲು ಬಯಸಿದರೆ, ಬಹುಸಂಖ್ಯಾತರ ಬಲದ ಆಧಾರದಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಇಂತಹ ಮೂಢನಂಬಿಕೆಗಳು ಮತ್ತು ಅಂಧಶ್ರದ್ಧೆಗಳಿಗೆ ಸರ್ಕಾರಿ ಅಧಿಕಾರಿಗಳು ಶರಣಾಗಬಾರದು. ದೇವರು ಅಥವಾ ಮೂರ್ತಿ ಯಾವುದೇ ಮಾನವನಿಗೆ ಹಾನಿ ಮಾಡುವುದಿಲ್ಲ. ಇದು ಕೇವಲ ಮೂಢನಂಬಿಕೆಯಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಮೂರ್ತಿಗಳನ್ನು ಅರ್ಜಿದಾರರಿಗೆ ಹಸ್ತಾಂತರಿಸಬೇಕು, ಅಧಿಕಾರಿಗಳು ಆರೋಪಿಸಿರುವಂತೆ ಅರ್ಜಿದಾರರ ಆವರಣದಲ್ಲಿ ಯಾವುದೇ ಅನಧಿಕೃತ ನಿರ್ಮಿತಿಗಳು ಇದ್ದಲ್ಲಿ ಅದರ ಬಗ್ಗೆ ಪ್ರತ್ಯೇಕವಾಗಿ ಕಾನೂನು ಕ್ರಮ ಕೈಗೊಳ್ಳಬಹುದು ಎಂದಿದೆ. ಖಾಸಗಿ ಆವರಣದಲ್ಲಿ ಅರ್ಜಿದಾರರು ಏರ್ಪಡಿಸುವ ಪೂಜೆ ಸಾರ್ವಜನಿಕರಿಗೆ ಅಡಚಣೆ ಉಂಟುಮಾಡುವ ರೀತಿಯಲ್ಲಿ ಇರಬಾರದು ಎಂದು ನ್ಯಾಯಾಲಯ ಇದೇ ವೇಳೆ ತಿಳಿಸಿದೆ.
ಏನಿದು ಪ್ರಕರಣ?
ಉತ್ತರ ಚೆನ್ನೈನಲ್ಲಿರುವ ಖಾಸಗಿ ನಿವಾಸವೊಂದರಲ್ಲಿ ಎ ಕಾರ್ತಿಕ್ ಎಂಬುವವರು ಹಿಂದೂ ದೇವತೆ ಶಿವಶಕ್ತಿ ದಕ್ಷೀಶ್ವರಿ, ಜೊತೆಗೆ ವಿನಾಯಗನ್ (ಗಣೇಶ) ಹಾಗೂ ವೀರಭದ್ರನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕಾರ್ತಿಕ್ ಅವರ ಪೂಜೆ ಮುಖ್ಯವಾಗಿ ಖಾಸಗಿ ಸ್ವರೂಪದ್ದಾಗಿದ್ದರೂ, ನೆರೆಹೊರೆಯವರು ಮತ್ತು ಇಚ್ಛೆಯಿದ್ದ ಭಕ್ತರಿಗೆ ಪೂಜೆಯಲ್ಲಿ ಭಾಗವಹಿಸಲು ಅವಕಾಶ ಇತ್ತು. ಆದರೆ ಈ ಪ್ರದೇಶದಲ್ಲಿ ಸಂಭವಿಸಿದ ಸರಣಿ ಅಸ್ವಾಭಾವಿಕ ಸಾವುಗಳಿಗೂ ಪೂಜೆಗೂ ಸಂಬಂಧವಿದೆ ಎಂದು ಸ್ಥಳೀಯರು ದೂರಿದ್ದರಿಂದ ಅಧಿಕಾರಿಗಳು ಮೂರ್ತಿಗಳನ್ನು ತೆರವುಗೊಳಿಸಿದ್ದರು.ಇದನ್ನೂ ಓದಿ: ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳದ ಗವಿಮಠ ಜಾತ್ರೆಗೆ ಅದ್ದೂರಿ ಚಾಲನೆ

