– 20 ರಾಜ್ಯಗಳ 76 ಕಂಪನಿಗಳಲ್ಲಿ ಡಿಸಿಜಿಐ ತಪಾಸಣೆ
ನವದೆಹಲಿ: ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧ ತಯಾರಿಸುತ್ತಿದ್ದ ಕಂಪನಿಗಳ (Pharmaceutical Companies) ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ (Government Of India) ಹಾಗೂ ರಾಜ್ಯ ಸರ್ಕಾರಗಳು, 18 ಕಂಪನಿಗಳ ಪರವಾನಗಿಯನ್ನ ರದ್ದುಗೊಳಿಸಿವೆ.
ಬರೋಬ್ಬರಿ 20 ರಾಜ್ಯಗಳ 76 ಕಂಪನಿಗಳಿಗೆ ಸೇರಿದ ಸ್ಥಳಗಳಲ್ಲಿ ಭಾರತೀಯ ಔಷಧಿ ನಿಯಂತ್ರಣ ಮಹಾ ನಿರ್ದೇಶನಾಲಯ (DCGI) ಹಾಗೂ ವಿವಿಧ ರಾಜ್ಯ ಸರ್ಕಾರಗಳು ಜಂಟಿ ಕಾರ್ಯಾಚರಣೆ ನಡೆಸಿದ ಬಳಿಕ 18 ಕಂಪನಿಗಳ ಪರವಾನಗಿಯನ್ನು ಸರ್ಕಾರ ರದ್ದುಗೊಳಿಸಿದೆ. ಆದರೆ ಪರವಾನಗಿ ರದ್ದುಗೊಳಿಸಿರುವ ಕಂಪನಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಪ್ಯಾನ್ – ಆಧಾರ್ ಕಾರ್ಡ್ ಲಿಂಕ್; ಜೂನ್ 30 ರವರೆಗೆ ಅವಧಿ ವಿಸ್ತರಣೆ
ಕಳಪೆ ಗುಣಮಟ್ಟದ ಔಷಧಗಳನ್ನು ತಯಾರಿಸುತ್ತಿದ್ದ 76 ಕಂಪನಿಗಳ ಮೇಲೆ ಮೊದಲ ಹಂತದಲ್ಲಿ ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ 1940ರ ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ. 18 ಕಂಪನಿಗಳ ಪರವಾನಗಿ ರದ್ದು ಮಾಡಿರುವುದಲ್ಲದೇ, 26 ಕಂಪನಿಗಳಿಗೆ ಶೋಕಾಸ್ ನೋಟಿಸ್ ಜಾರಿಮಾಡಲಾಗಿದೆ. 3 ಕಂಪನಿಗಳ ಕೆಲವು ಉತ್ಪನ್ನಗಳಿಗೆ ನೀಡಿದ್ದ ಅನುಮತಿ ರದ್ದು ಮಾಡಲಾಗಿದೆ. ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ಈ ಕಾರ್ಯಾಚರಣೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಳಪೆ ಗುಣಮಟ್ಟದ ಔಷಧಗಳ ವಿರುದ್ಧದ ವಿಶೇಷ ಅಭಿಯಾನದ ಭಾಗವಾಗಿ ಕಾನೂನು ಜಾರಿ ಸಂಸ್ಥೆಗಳು ಒಟ್ಟು 203 ಕಂಪನಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಹಿಮಾಚಲ ಪ್ರದೇಶದ 70, ಉತ್ತರಾಖಂಡದ 45 ಹಾಗೂ ಮಧ್ಯಪ್ರದೇಶದ 23 ಕಂಪನಿಗಳು ಸೇರಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳನ್ನ ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಪಾಸಣೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಮೇಶ್ ಪಾಲ್ ಕಿಡ್ನ್ಯಾಪ್, ಕೊಲೆ ಪ್ರಕರಣ – ಮಾಜಿ ಸಂಸದ, ಪಾತಕಿ ಅತೀಕ್ ಅಹ್ಮದ್‌ಗೆ ಜೀವಾವಧಿ ಶಿಕ್ಷೆ
ಈ ಹಿಂದೆ ಮರಿಯನ್ ಬಯೋಟೆಕ್‌ನ ಮೂವರು ಹಿರಿಯ ಉದ್ಯೋಗಿಗಳ ವಿರುದ್ಧ ಕಲಬೆರಕೆ ಔಷಧಗಳ ತಯಾರಿಕೆ ಮತ್ತು ಮಾರಾಟದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ನೋಯ್ಡಾ ಪೊಲೀಸರು ಬಂಧಿಸಿದ್ದರು.
ಏಕೆಂದರೆ ಮೇರಿಯನ್ ಬಯೋಟೆಕ್ ಕಂಪನಿಯ ಔಷಧಿ ಡಿಸೆಂಬರ್ 2022ರಲ್ಲಿ ಉಜ್ಬೇಕಿಸ್ತಾನ್‌ನಲ್ಲಿ ಅನೇಕ ಮಕ್ಕಳ ಸಾವಿಗೆ ಕಾರಣವಾಗಿತ್ತು. ಆಗ ಭಾರತದ ಕೇಂದ್ರ ಡ್ರಗ್ಸ್ ನಿಯಂತ್ರಣ ಮಂಡಳಿ (CDSCO) ಈ ವಿಷಯದ ಬಗ್ಗೆ ತನಿಖೆ ಆರಂಭಿಸಿತ್ತು.