– ಮಹಿಳಾ ಮತದಾರರನ್ನು ಸೆಳೆಯಲು ಮದ್ಯ ಬ್ಯಾನ್
– ಅಕ್ರಮವಾಗಿ ರಾಜ್ಯಗಳಿಗೆ ಬರುತ್ತಿದೆ ಮದ್ಯ
ನವದೆಹಲಿ: ನೆರೆಯ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಈಗಾಗಲೇ ಆಂಧ್ರ ಸರ್ಕಾರ ಸುಮಾರು 3,500 ಖಾಸಗಿ ಮದ್ಯದಂಗಡಿಗಳ್ನು ತನ್ನ ಸ್ವಾದೀನಕ್ಕೆ ಪಡೆದುಕೊಂಡಿದೆ. ಹೀಗೆ ಹಂತ ಹಂತವಾಗಿ ಮದ್ಯದಂಗಡಿಗಳನ್ನು ಮುಚ್ಚಿಸುತ್ತಾ, ಮುಂದಿನ ವರ್ಷ ಆಂಧ್ರ ಪ್ರದೇಶವನ್ನು ಮದ್ಯ ನಿಷೇಧ ರಾಜ್ಯ ಎಂದು ಘೋಷಿಸಲು ಜಗನ್ ಮೋಹನ್ ರೆಡ್ಡಿ ಸಿದ್ಧತೆ ನಡೆಸಿಕೊಂಡಿದ್ದಾರೆ. ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮದ್ಯ ನಿಷೇಧ ಮಾಡಿದ್ದೇವೆ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ನೀಡಲಿದ್ದಾರೆ.
ಸಂಪೂರ್ಣವಾಗಿ ನಿಷೇಧ ಮಾಡುವುದರಿಂದ ರಾಜ್ಯದಲ್ಲಿ ಶಾಂತಿ ನೆಲಸಲಿದೆ. ಹಾಗೆಯೇ ಅಪರಾಧ ಚಟುವಟಿಕೆಗಳು ಮತ್ತು ಕೌಟುಂಬಿಕ ಸಮಸ್ಯೆಗಳು ಕಡಿಮೆ ಆಗಿ ಸಮಾಜದಲ್ಲಿ ಶಾಂತಿ ನೆಲಸಲಿದೆ ಎಂದು ಜಗನ್ ಮೋಹನ್ ರೆಡ್ಡಿ ಹೇಳುತ್ತಾರೆ. ಚುನಾವಣೆ ಪ್ರಚಾರದಲ್ಲಿ ಜಗನ್ ಮೋಹನ್ ರೆಡ್ಡಿ ಇದೇ ವಿಷಯವನ್ನು ಪ್ರಸ್ತಾಪಿಸಿ ಮಹಿಳೆಯರ ಬಳಿ ಮತ ಕೇಳಿದ್ದರು. ಮದ್ಯ ನಿಷೇಧಗೊಂಡಿರುವ ರಾಜ್ಯಗಳಲ್ಲಿ ಭಿನ್ನ ಭಿನ್ನ ಕಾನೂನುಗಳಿವೆ. ಅವುಗಳ ಪುಟ್ಟ ಸಮೀಕ್ಷೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಖಜಾನೆ ಮೇಲೆ ಭಾರೀ ಹೊಡೆತ: ಮದ್ಯ ಮಾರಾಟದಿಂದ ಸಂಗ್ರಹವಾಗುವ ತೆರಿಗೆಯೇ ರಾಜ್ಯದ ಬೊಕ್ಕಸಕ್ಕೆ ಮೂಲ ಆದಾಯವಾಗಿರುತ್ತದೆ. ಬಹುತೇಕ ರಾಜ್ಯಗಳಿಗೆ ಮದ್ಯದ ಆದಾಯ ನಾಲ್ಕನೇ ಸ್ಥಾನದಲ್ಲಿದೆ. ದಿಢೀರ್ ಆದೇಶಗಳಿಂದ ಸರ್ಕಾರ ತನ್ನ ಖರ್ಚುಗಳನ್ನು ತಗ್ಗಿಸಬೇಕಾಗುತ್ತದೆ. ಮುಂದಿನ ವರ್ಷಗಳಲ್ಲಿ ಜಿಎಸ್‍ಟಿ ಸಂಗ್ರಹ ಸ್ಥಿರವಾಗಿರೋದರ ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಲಭ್ಯವಾಗಬೇಕು. ಇಲ್ಲವಾದಲ್ಲಿ ಇದರ ನೇರ ಪರಿಣಾಮ ರಾಜ್ಯದ ಅಭಿವೃದ್ಧಿಯ ಮೇಲಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಮದ್ಯ ನಿಷೇಧ ಪರೋಕ್ಷವಾಗಿ ರಾಜ್ಯದ ಪ್ರವಾಸೋದ್ಯಮಕ್ಕೆ ಸಣ್ಣ ಹೊಡೆತ ಬೀಳುವುದುಂಟು. ಹೆಚ್ಚಿನ ಪ್ರವಾಸಿಗರು ಮದ್ಯ ನಿಷೇಧಿತ ರಾಜ್ಯಗಳ ಪ್ರವಾಸಕ್ಕೆ ಹಿಂದೇಟು ಹಾಕುತ್ತಾರೆ. ಇದರಿಂದ ಪ್ರವಾಸಿ ಸ್ಥಳಗಳಲ್ಲಿ ಉದ್ಯೋಗ ಕಡಿತಗೊಳ್ಳುತ್ತವೆ. ಹಾಗಾಗಿ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಚಾರ ನೀಡಬೇಕು.
ಮದ್ಯ ನಿಷೇಧಿತ ರಾಜ್ಯಗಳು:
1. 1960 ಮೇನಲ್ಲಿ ಮೊದಲ ಬಾರಿಗೆ ಗುಜರಾತಿನಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಇಂದಿಗೂ ಇಲ್ಲಿ ಮದ್ಯ ನಿಷೇಧವಿದೆ.
2. 1989ರಲ್ಲಿ ನಾಗಾಲ್ಯಾಂಡ್ ನಲ್ಲಿ ಮದ್ಯಪಾನ ಮತ್ತು ಮಾರಾಟಕ್ಕೆ ನಿಷೇಧವಿದೆ.
3. 1991ರಲ್ಲಿ ಮಣಿಪುರದಲ್ಲಿ ಮದ್ಯ ನಿಷೇಧಿಸಲಾಗಿತ್ತು. ತದನಂತರ 2002ರಲ್ಲಿ ನಿಷೇಧವನ್ನು ತೆರವುಗೊಳಿಸಲಾಗಿದೆ.
4. 1997ರಲ್ಲಿ ಮೀಜೋರಾಂನಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. 2014ರಲ್ಲಿ ನಿಷೇಧವನ್ನು ಹಿಂಪಡೆದು, 2019ರಲ್ಲಿ ಮತ್ತೆ ನಿಷೇಧ ಆದೇಶ ಹೊರಡಿಸಲಾಗಿದೆ.
5. 1996ರಲ್ಲಿ ಹರ್ಯಾಣದಲ್ಲಿ ನಿಷೇಧ ವಿಧಿಸಿ, 1998ರಲ್ಲಿ ಆದೇಶವನ್ನು ಹಿಂಪಡೆಯಲಾಗಿದೆ.
6. 1974ರಲ್ಲಿ ತಮಿಳುನಾಡಿನಲ್ಲಿ ಸಂಪೂರ್ಣ ಮದ್ಯದ ಮೇಲೆ ನಿಷೇಧ ವಿಧಿಸಲಾಗಿತ್ತು. ಆದ್ರೆ 1981ರಲ್ಲಿ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿತ್ತು.
7. ಬಿಹಾರ ಸಿಎಂ ನಿತೀಶ್ ಕುಮಾರ್ 2016ರಿಂದ ಮದ್ಯ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.
8. ಕೇರಳದಲ್ಲಿ 2014ರಲ್ಲಿ ಮದ್ಯ ಮೇಲೆ ನಿಷೇಧ ವಿಧಿಸಿ ಮೂರು ವರ್ಷಗಳ ಬಳಿಕ ಅಂದ್ರೆ 2017ರಲ್ಲಿ ತೆರವುಗೊಳಿಸಲಾಗಿದೆ.
9. 1992ರಲ್ಲಿ ಆಂಧ್ರದ ಟಿಡಿಪಿ ಸರ್ಕಾರ ಮದ್ಯವನ್ನು ನಿಷೇಧ ಮಾಡಿತ್ತು. ರಾಜ್ಯ ಬೊಕ್ಕಸಕ್ಕೆ ಹೊಡೆತ ಬಿದ್ದ ಕಾರಣ ನಾಲ್ಕು ವರ್ಷಗಳ ಬಳಿಕ ತನ್ನ ಆದೇಶವನ್ನು ಹಿಂಪಡೆಯಿತು. ಈಗ ಜಗನ್ ಮೋಹನ್ ರೆಡ್ಡಿ ಮದ್ಯ ಮುಕ್ತ ರಾಜ್ಯಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಕುಡುಕರ ಮುಕ್ತವಾಗುತ್ತಾ ರಾಜ್ಯ?
ಗುಜರಾತ್, ನಾಗಾಲ್ಯಾಂಡ್ ಮತ್ತು ಬಿಹಾರ್ ಮದ್ಯ ಮುಕ್ತ ರಾಜ್ಯಗಳಾಗಿವೆ. ಆದರೆ ಈ ರಾಜ್ಯದ ಜನರು ಮದ್ಯ ಸೇವನೆಯನ್ನು ತೊರೆದಿಲ್ಲ. ಬದಲಾಗಿ ನೆರೆಯ ರಾಜ್ಯಗಳಿಂದ ಅಕ್ರಮವಾಗಿ ಮದ್ಯವನ್ನು ತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮದ್ಯ ನಿಷೇಧಗೊಳಿಸಿರುವ ಕಳೆದ ಆರು ತಿಂಗಳಿನಿಂದ ಮೀಜೋರಾಂ ಸರ್ಕಾರ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿದೆ. ಬಿಹಾರ, ಗುಜರಾತ್ ರಾಜ್ಯಗಳಂತೆ ಮೀಜೋರಾಂ ರಾಜ್ಯದಲ್ಲಿಯೂ ಅಕ್ರಮ ಮದ್ಯ ಮಾರಾಟ ಆರಂಭಗೊಂಡಿವೆ.
2016ರಲ್ಲಿ ಮದ್ಯ ನಿಷೇಧ ಮಾಡಿರುವ ಬಿಹಾರಕ್ಕೆ ಪಕ್ಕದ ರಾಜ್ಯಗಳಾದ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಿಂದ ಅಕ್ರಮವಾಗಿ ಮದ್ಯ ಬರುತ್ತಿದೆ. ಈ ಅಕ್ರಮ ದಂಧೆಯಲ್ಲಿ ರಾಜ್ಯದ ಗಡಿ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವಡೆ ಗ್ರಾಮಗಳಿಂದ ಗ್ರಾಮಕ್ಕೆ ಮದ್ಯ ರವಾನೆ ಆಗುತ್ತೆ ಎಂದು ವರದಿಯಾಗಿದೆ.
ನಾಗಾಲ್ಯಾಂಡ್ ನಲ್ಲಿ ಮದ್ಯ ನಿಷೇಧಗೊಳಿಸಿದ ಬಳಿಕ ಅಸ್ಸಾಂನಿಂದ ಅಕ್ರಮ ಸರಬರಾಜು ಹೆಚ್ಚಾಯ್ತು. ಒಮ್ಮೆ ಈ ಕುರಿತು ಪ್ರತಿಕ್ರಿಯಿಸಿದ್ದ ಅಸ್ಸಾಂ ಸಿಎಂ, ಮದ್ಯ ನಿಷೇಧಗೊಂಡಿರುವ ನಾಗಾಲ್ಯಾಂಡ್ ಆಲ್ಕೋಹಾಲ್ ನಿಂದ ತುಂಬಿಕೊಂಡಿದೆ. ನಿಷೇಧ ಮಾಡುವುದರಿಂದ ಜನರಿಗೆ ಮದ್ಯ ಕುಡಿಯುವ ತುಡಿತ ಹೆಚ್ಚಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರು ಅಕ್ರಮದ ಹಾದಿ ತುಳಿಯುತ್ತಾರೆ. ಹಣದ ಆಸೆಗಾಗಿ ಪೊಲೀಸರು ಸೇರಿದಂತೆ ಅಧಿಕಾರಿಗಳು ಭ್ರಷ್ಟರಾಗುತ್ತಾರೆ ಎಂದಿದ್ದರು.
ಮದ್ಯ ಮಾರಾಟದಿಂದ ಅತಿ ಹೆಚ್ಚು ಆದಾಯ ಪಡೆಯುವ ಮೊದಲ 10 ರಾಜ್ಯಗಳು (2015-16 ಅಂಕಿ ಅಂಶಗಳ ಪ್ರಕಾರ, ಕೋಟಿ ರೂ.ಗಳಲ್ಲಿ)
1. ತಮಿಳುನಾಡು – 29,672
2. ಹರ್ಯಾಣ – 19,703
3. ಮಹಾರಾಷ್ಟ್ರ – 18,000
4. ಕರ್ನಾಟಕ – 15,332
5. ಉತ್ತರ ಪ್ರದೇಶ – 14,083
6. ಆಂಧ್ರ ಪ್ರದೇಶ – 12,736
7. ತೆಲಂಗಾಣ – 12,144
8. ಮಧ್ಯ ಪ್ರದೇಶ – 7,926
9. ರಾಜಸ್ಥಾನ – 5,585
10. ಪಂಜಾಬ್ – 5,000
ಇತ್ತೀಚಿನ ವರ್ಷಗಳಲ್ಲಿ ಮದ್ಯ ಮಾರಾಟ ಶೇ.38ರಷ್ಟು ಏರಿಕೆ ಕಂಡಿದೆ. 2010ರಿಂದ 2017ರ ಪ್ರತಿ ವಯಸ್ಕನ ಬಳಕೆ 4.3 ಲೀ.ನಿಂದ 5.9 ಲೀ.ನಷ್ಟು ಏರಿಕೆ ಕಂಡಿದೆ.
ಕೇಂದ್ರ ಸರ್ಕಾರ ಏಪ್ರಿಲ್ 1958ರೊಳಗೆ ಭಾರತವನ್ನು ಮದ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಇಂದಿಗೂ ಈ ಗುರಿ ತಲುಪಲು ಯಾವ ಸರ್ಕಾರಗಳು ಮುಂದಾಗಿಲ್ಲ. ಸ್ವತಂತ್ರ ನಂತರ ಎರಡು ದಶಕಗಳವರೆಗೆ ಮಹಾರಾಷ್ಟ್ರ, ತಮಿಳುನಾಡು, ಒಡಿಶಾ, ಕರ್ನಾಟಕ ಮತ್ತು ಕೇರಳದಲ್ಲಿ ಮದ್ಯ ಮಾರಾಟ ಇರಲಿಲ್ಲ. 1967ರಿಂದ ಎಲ್ಲ ರಾಜ್ಯಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಈ ನಡುವೆ ಕೆಲ ರಾಜ್ಯಗಳು ಬೊಕ್ಕಸಕ್ಕೆ ಹೊಡೆತ ಬಿದ್ದರೂ ಪರವಾಗಿಲ್ಲ ಎಂದು ಮದ್ಯ ನಿಷೇಧ ಮಾಡಿಕೊಂಡಿವೆ.