ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರ ಬಿಡುಗಡೆಗೊಳ್ಳಲು ಕೆಲ ಸಿನಿಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಒಂದೊಳ್ಳೆ ಕಥೆ, ಒಡಲಲ್ಲಿರಬಹುದಾದ ವಿಶೇಷತೆಗಳ ಮೂಲಕ ಕೆರೆಬೇಟೆಯೀಗ (Kerebete) ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇದರೊಂದಿಗೆ ಒಂದಷ್ಟು ವರ್ಷಗಳ ಅಂತರದ ನಂತರ ಗೌರಿಶಂಕರ್ ಎಸ್ ಆರ್ ಜಿ ಮತ್ತೆ ನಾಯಕನಾಗಿ, ವಿಶಿಷ್ಟ ಗೆಟಪ್ಪಿನಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಗೌರಿಶಂಕರ್ (Gowrishankar) ಪಾಲಿಗಿದು ನಿಜಕ್ಕೂ ನಿರ್ಣಾಯಕ ಚಿತ್ರ. ಒಂದೆಡೆ ನಿರ್ದೇಶನ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿ, ಮತ್ತೊಂದೆಡೆಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹಂಚಿಕೊಂಡು ನಾಯಕನಾಗಿ ನಟಿಸಿರುವ ಗೌರಿಶಂಕರ್ ಪುಷ್ಕಳ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಪಿಯುಸಿ ಮುಗಿಸಿಕೊಂಡಾಕ್ಷಣವೇ ಸಿನಿಮಾ ಕನಸು ಹೊತ್ತು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದವರು ಗೌರಿಶಂಕರ್. ನಟನಾಗುವ ಕನಸಿಟ್ಟುಕೊಂಡೇ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಲಾರಂಭಿಸಿದ ಅವರು ಅರಸು ಮುಂತಾದ ಹಿಟ್ ಸಿನಿಮಾಗಳ ಭಾಗವಾಗಿ ಕೆಲಸ ಮಾಡಿದ್ದಾರೆ. ಹೀಗೆ ನಿರ್ದೇಶನ ವಿಭಾಗದಲ್ಲಿದ್ದುಕೊಂಡು ಆ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದ ಗೌರಿಶಂಕರ್ ನಂತರ ನಾಲಕ್ಕು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ನಂತರ ಅಣಜಿ ನಾಗರಾಜ್ ನಿರ್ಮಾಣದ ಜೋಕಾಲಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಆ ಚಿತ್ರ ಭಾರೀ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಬಳಿಕ ಒಂದಷ್ಟು ಗ್ಯಾಪಿನ ನಂತರ ರಾಜಹಂಸ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದ ಗೌರಿಶಂಕರ್ ಅವರಿಗೆ ಮೆಚ್ಚುಗೆಯಷ್ಟೇ ಸಿಕ್ಕಿತ್ತು. ಸಿನಿಮಾ ಚೆನ್ನಾಗಿದ್ದರೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.
- Advertisement
- Advertisement
ಇಂಥಾ ಹಲವಾರು ನಿರಾಸೆಗಳನ್ನು ಕಂಡೂ ಸಿನಿಮಾ ವ್ಯಾಮೋಹಕ್ಕೆ ಅಂಟಿಕೊಂಡಿರುವ ಗೌರಿಶಂಕರ್, ಅತ್ಯಂತ ಶ್ರದ್ಧೆಯಿಂದ ಪೊರೆದಿರುವ ಚಿತ್ರ ಕೆರೆಬೇಟೆ. ರಾಜ್ ಗುರು ಆರಂಭಿಕವಾಗಿ ಒಂದೆಳೆ ಕಥೆ ಹೇಳಿದಾಗಲೇ ಅದು ಗೌರಿಶಂಕರ್ ಅವರಿಗೆ ಹಿಡಿಸಿತ್ತಂತೆ. ಅದು ಮಲೆನಾಡು ಸೀಮೆಯ ಕಥೆಯಾದ್ದರಿಂದ ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ಖುದ್ದು ಅವರೇ ವಹಿಸಿಕೊಂಡಿದ್ದರು. ವರ್ಷಗಟ್ಟಲೆ ಶ್ರಮ ವಹಿಸಿ ಒಟ್ಟಿಗೆ ಕೂತು ಸ್ಕ್ರೀನ್ ಪ್ಲೇ ಸಿದ್ಧಪಡಿಸಿದ್ದರು. ಕಡೆಗೂ ಚಿತ್ರೀಕರಣದ ಅಖಾಡಕ್ಕಿಳಿದು ಅಂದುಕೊಂಡಂತೆಯೇ ಮಾಡಿ ಮುಗಿಸಿದ್ದಾರೆ. ಆ ನಂತರದಲ್ಲಿ ಹಾಡು, ಟ್ರೈಲರ್ ಗಳ ಮೂಲಕ, ಕಥೆಯ ಆತ್ಮಕ್ಕೆ ತಕ್ಕುದಾದ ಪ್ರಚಾರದ ಪಟ್ಟುಗಳ ಮೂಲಕ ಕೆರೆಬೇಟೆಯನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತಂದುಬಿಟ್ಟಿದ್ದಾರೆ.
ಯಾವುದರಲ್ಲಿಯೂ ರಾಜಿಯಾಗದಂತೆ ರಿಚ್ ಆಗಿ ಈ ಚಿತ್ರ ಮೂಡಿಬಂದಿರುವ ಖುಷಿ ಗೌರಿಶಂಕರ್ ಅವರಿಗಿದೆ. ಕಿಚ್ಚಾ ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್, ದಿನಕರ್ ತೂಗುದೀಪ, ಡಾಲಿ ಧನಂಜಯ್, ಜಯಣ್ಣರಂಥವರೆಲ್ಲರ ತುಂಬು ಸಹಕಾರ ಸಿಕ್ಕಿರೋದರಿಂದ ಗೌರಿಶಂಕರ್ ನಿರಾಳವಾಗಿದ್ದಾರೆ. ಸದ್ಯದ ಮಟ್ಟಿಗಂತೂ ಪ್ರೇಕ್ಷಕರೆಲ್ಲರ ಈ ವಾರದ ಪ್ರಧಾನ ಆಕರ್ಷಣೆಯಾಗಿ ಕೆರೆಬೇಟೆ ಚಿತ್ರ ಕಂಗೊಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ ಗ್ರಾಮೀಣ ಭಾಗದ ಕಥೆ ಹೊಂದಿರುವ ಚಿತ್ರ ಕೆರೆಬೇಟೆ. ಇದು ಪ್ರತೀ ವರ್ಗದ ಪ್ರೇಕ್ಷಕರಿಗೂ ಬೇರೆಯದ್ದೇ ಅನುಭೂತಿ ತುಂಬಲಿದೆ. ನಿರೀಕ್ಷೆಯಿಟ್ಟು ಬಂದ ಪ್ರತೀ ಪ್ರೇಕ್ಷಕರನ್ನೂ ಸಂತೃಪ್ತಗೊಳಿಸಲಿದೆ ಎಂಬ ನಂಬಿಕೆ ಗೌರಿಶಂಕರ್ ಅವರಲ್ಲಿದೆ.
ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.