ಗೌರಿಶಂಕರ್ (GowriShankar) ನಾಯಕನಾಗಿ ನಟಿಸಿಒರುವ ಕೆರೆಬೇಟೆ (Kerebete) ಚಿತ್ರ ಇದೇ ಮಾರ್ಚ್ 15ರಂದು ತೆರೆಗಾಣಲಿದೆ. ಮಲೆನಾಡು ಭಾಗದಲ್ಲಿ ಘಟಿಸುವ ಗಟ್ಟಿ ಕಥೆಯನ್ನೊಳಗೊಂಡಿರುವ ಸುಳಿವಂತೂ ಈಗಾಗಲೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ರಾಜ್ ಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಪ್ರತಿಭಾನ್ವಿತ ಕಲಾವಿದರದ್ದೊಂದು ದಂಡೇ ಇದೆ. ಒಟ್ಟಾರೆ ಕಥೆ, ತಾಂತ್ರಿಕತೆ ಮುಂತಾದವುಗಳದ್ದೇ ಒಂದು ತೂಕವಾದರೆ, ಆಯಾ ಪಾತ್ರಗಳಿಗೆ ಜೀವ ತುಂಬಿರುವ ಕಲಾವಿದರು ಕೆರೆಬೇಟೆಯ ನಿಜವಾದ ಶಕ್ತಿ. ಈಗಾಗಲೇ ಕಿರುತೆರೆ, ಹಿರಿತೆರೆ ಪ್ರೇಕ್ಷಕರಿಗೆಲ್ಲ ಚಿರಪರಿಚಿತರಾಗಿರುವ ಹರಿಣಿ ಶ್ರೀಕಾಂತ್ ಕೆರೆಬೇಟೆಯ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಹರಿಣಿ (Harini) ತೊಂಭತ್ತರ ದಶಕದಿಂದೀಚೆಗೆ ನಿರಂತರವಾಗಿ ನಟಿಯಾಗಿ ಚಾಲ್ತಿಯಲ್ಲಿದ್ದುಕೊಂಡು, ಥರ ಥರದ ಪಾತ್ರಗಳ ಮೂಲಕ ಮನಗೆದ್ದವರು. ಹಲವಾರು ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ಸದಾ ನೆನಪಿನಲ್ಲುಳಿಯುವಂಥಾ ಪಾತ್ರಗಳಿಗೆ ಹರಿಣಿ ಜೀವ ತಗುಂಬಿದ್ದಾರೆ. ಅದರಲ್ಲಿಯೂ ಧಾರಾವಾಹಿಯಿದ್ದರೂ, ಸಿನಿಮಾವಾಗಿದ್ದರೂ ಅಮ್ಮನ ಪಾತ್ರಗಳೇ ಹರಿಣಿಯವರನ್ನು ಅರಸಿ ಬರುತ್ತವೆ. ಅದೇ ರೀತಿ ಕೆರೆಬೇಟೆ ಚಿತ್ರದಲ್ಲಿಯೂ ಅವರು ಅಮ್ಮನ ಪಾತ್ರವನ್ನೇ ನಿರ್ವಹಿಸಿದ್ದಾರೆ.
Advertisement
Advertisement
ಹರಿಣಿ ಪಾಲಿಗೆ ಅಮ್ಮನ ಪಾತ್ರಗಳು ಮಾಮೂಲು. ಆದರೆ ಕೆರೆಬೇಟೆಯ ನಾಯಕನ ಅಮ್ಮನ ಪಾತ್ರವನ್ನು ಆವಾಹಿಸಿಕೊಂಡಿದ್ದು ಮಾತ್ರ ಅವರ ಪಾಲಿಗೆ ವಿಶಿಷ್ಟ ಅನುಭೂತಿ. ಯಾಕೆಂದರೆ, ಅದು ಮಲೆನಾಡಿನ ಗುಣಲಕ್ಷಣಗಳನ್ನು ಹೊಂದಿರುವ ಗಟ್ಟಿಗಿತ್ತಿ ಹೆಣ್ಣುಮಗಳ ಪಾತ್ರ. ನಾಯಕನ ತಾಯಿ ಗೌರಮ್ಮನ ಪಾತ್ರವನ್ನವರು ತೀವ್ರವಾಗಿ ಒಳಗಿಳಿಸಿಕೊಂಡು ನಟಿಸಿದ್ದಾರಂತೆ. ಹಾಗಂತ ಅದು ಸಲೀಸಿನ ಸಂಗತಿ ಆಗಿರಲಿಲ್ಲ. ಮಲೆನಾಡು ಸೀಮೆಯ ಒಂದಷ್ಟು ಹಿರಿಯ ಮಹಿಳೆಯರ ಹಾವಭಾವಗಳನ್ನು ಕಂಡು, ಅಭ್ಯಸಿಸಿದ ನಂತರವೇ ಹರಿಣಿ ಈ ಪಾತ್ರವಾಗಿದ್ದಾರೆ. ಇನ್ನುಳಿದಂತೆ, ಆ ಭಾಗದ ಟಿಪಿಕಲ್ ಶೈಲಿಯ ಮಲೆನಾಡು ಭಾಷೆಯನ್ನೂ ಕೂಡಾ ಹರಿಣಿ ಇಷ್ಟಪಟ್ಟು ಕಲಿತುಕೊಂಡಿದ್ದಾರಂತೆ. ಈ ಎಲ್ಲದರಿಂದಾಗಿ ಆ ಪಾತ್ರ ವಿಶೇಷವಾಗಿ ಮೂಡಿ ಬಂದಿದೆ ಎಂಬುದು ಹರಿಣಿ ಅವರ ಅಭಿಪ್ರಾಯ.
Advertisement
ಹರಿಣಿ ಪಾಲಿಗೆ ಕೆರೆಬೇಟೆ ಚಿತ್ರವಾಗಿಯಷ್ಟೇ ಅಲ್ಲದೇ, ಭಾವನಾತ್ಮಕವಾಗಿಯೂ ವಿಶೇಷ ಸಿನಿಮಾ. ಅವರು ಮೂಲತಃ ಚಿಕ್ಕಮಗಳೂರಿನವರು. ಮಲೆನಾಡಿನಲ್ಲಿಯೇ ಅವರ ಮೂಲ ಬೇರುಗಳು ಹಬ್ಬಿಕೊಂಡಿವೆ. ಹಾಗಿದ್ದರೂ ಕೂಡಾ ಹರಿಣಿ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೆ. ತಾನು ಮಲೆನಾಡು ಮೂಲದವರೆಂಬ ಹೆಮ್ಮೆಯನ್ನು ಸದಾ ಕಾಯ್ದುಕೊಂಡು ಬಂದಿದ್ದ ಹರಿಣಿ ಪಾಲಿಗೆ ಕೆರೆಬೇಟೆಯ ಮೂಲಕ ಮಲೆನಾಡಿನ ಗರ್ಭದಲ್ಲಿಯೇ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ಇದುವರೆಗೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿದ್ದರೂ, ಕೆರೆಬೇಟೆಯ ನಾಯಕನ ಅಮ್ಮನ ಪಾತ್ರ ಹರಿಣಿ ಪಾಲಿಗೆ ವಿಶೇಷವಾಗಿ ಒಳಗಿಳಿದಿದೆ. ಇಂಥಾದ್ದೊಂದು ಅಪರೂಪದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿರುವ ತುಂಬಿ ಸಂಭ್ರಮ ಅವರಲ್ಲಿದೆ.
ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ