ತಮಿಳು ನಟಿ ನಿವೇತಾ ಪೇತುರಾಜ್ ಮೊನ್ನೆಯಷ್ಟೇ ಗಾಸಿಪ್ ಕುರಿತಾಗಿ ಗರಂ ಆಗಿದ್ದರು. ತಮ್ಮನ್ನು ರಾಜಕಾರಣಿ ಉದಯನಿಧಿ ಸ್ಟಾಲಿನ್ (Udayanidhi) ಜೊತೆ ಕೆಟ್ಟದ್ದಾಗಿ ಬಿಂಬಿಸುತ್ತಿರುವುದಕ್ಕೆ ತರಾಟೆಗೆ ತಗೆದುಕೊಂಡಿದ್ದರು. ಇದೀಗ ಸಮಾಧಾನದಿಂದ ಗಾಸಿಪ್ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಕಷ್ಟದ ದಿನಗಳನ್ನೂ ಅವರು ಹಂಚಿಕೊಂಡಿದ್ದಾರೆ.
ತಮ್ಮ ಸಿನಿಮಾದಲ್ಲಿ ನಟಿಸಿದ್ದ ನಟಿಯೊಬ್ಬರಿಗೆ ರಾಜಕಾರಣಿಯೊಬ್ಬರು ಕೋಟ್ಯಂತರ ಮೌಲ್ಯದ ಫ್ಲ್ಯಾಟ್ ಕೊಡಿಸಿ, ದುಬೈನಲ್ಲಿ ಇಟ್ಟಿದ್ದಾರೆ ಎನ್ನುವ ವಿಚಾರ ತಮಿಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ನಟಿ ನಿವೇತಾ ಪೇತುರಾಜ್, ಆ ರಾಜಕಾರಣಿಯಿಂದ (Politician) ಸಾಕಷ್ಟು ದುಬಾರಿ ಗಿಫ್ಟ್ ಗಳನ್ನು ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು. ಆ ರಾಜಕಾರಣಿ ಬೇರೆ ಯಾರೂ ಅಲ್ಲ, ಉದಯನಿಧಿ ಸ್ಟಾಲಿನ್ ಎಂದೂ ತಳುಕು ಹಾಕಲಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಾಕಷ್ಟು ಹರಿದಾಡಿದ್ದರಿಂದ ನಿವೇತಾ ಪೇತುರಾಜ್ (Nivetha Pethuraj) ಗರಂ ಆಗಿದ್ದರು. ಈ ಸುದ್ದಿಯನ್ನು ಹರಡುತ್ತಿರುವವರಿಗೆ ವಾರ್ನ್ ಕೂಡ ನೀಡಿದ್ದರು. ನಾನು 16ನೇ ವಯಸ್ಸಿನಲ್ಲೇ ದುಡಿಯಲು ಪ್ರಾರಂಭಿಸಿದವಳು. ಅತ್ಯಂತ ಸುಂಸ್ಕೃತ ಮನೆತನದಿಂದ ಬಂದವಳು. ದುಡ್ಡು ಮಾಡಲು ಅಡ್ಡ ದಾರಿ ಹಿಡಿಯುವವಳು ಅಲ್ಲ. ಈ ಸುದ್ದಿಯನ್ನು ಹಬ್ಬಿಸುವಾಗ ಎಚ್ಚರವಿರಲಿ ಎಂದಿದ್ದರು ನಿವೇತಾ.
ತಮ್ಮ ಕುಟುಂಬ ಹತ್ತಾರು ವರ್ಷಗಳಿಂದ ದುಬೈನಲ್ಲಿ (Dubai) ನೆಲೆಸಿದೆ. ನಾನೂ ಕೂಡ ಸಂಪಾದನೆ ಮಾಡಿಕೊಂಡು ಬಂದಿದ್ದೇನೆ. ಅದಕ್ಕಾಗಿ ಈವರೆಗೂ ಯಾವುದೇ ಅಡ್ಡದಾರಿ ತುಳಿದಿಲ್ಲ. ಅದರ ಅವಶ್ಯಕತೆಯೂ ತಮಗಿಲ್ಲ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಇಂತಹ ವಿಷಯಗಳು ಬಂದಾಗ ನೋವಾಗತ್ತೆ ಎನ್ನುವುದು ನಿವೇತಾ ಮಾತು. ತಮಗೆ ಯಾವುದೇ ರಾಜಕಾರಣಿಯ ಜೊತೆ ನಂಟಿಲ್ಲ. ಅವರೊಂದಿಗೆ ಕೆಲಸ ಮಾಡಿದ್ದೇನೆ. ಅದು ಆಯಾ ಸಿನಿಮಾಗೆ ಮಾತ್ರ ಸಿಮೀತ. ಅದರಾಚೆ ಯಾವ ಸ್ನೇಹವೂ ಇಲ್ಲ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ.
ಯಾರಿದು ನಿವೇತಾ?
ತೆಲುಗು ಮತ್ತು ತಮಿಳು ನಟಿ ನಿವೇತಾ ಪೇತುರಾಜ್. ತಮಿಳಿನ ಒರು ನಾಲ್ ಕೂತು ಸಿನಿಮಾದ ಮೂಲಕ 2016ರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಮೆಂಟಲ್ ಮದಿಲೋ ಚಿತ್ರದಿಂದ ತೆಲುಗು ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡರು.
ತಮಿಳು ನಾಡಿನ ಮಧುರೈನಲ್ಲಿ ಜನಿಸಿದರೂ, ನಂತರದ ದಿನಗಳಲ್ಲಿ ಕುಟುಂಬ ಸಮೇತ ಅವರು ದುಬೈನಲ್ಲಿ ವಾಸವಿದ್ದಾರೆ. ಹದಿನೆಂಟಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಿವೇತಾ, ಚಿತ್ರಲಹರಿ, ಕೆಂಪು, ಪಾಮಗ್, ಬ್ಲಡಿ ಮೇರಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಇವರು ನಾಯಕಿಯಾಗಿ ನಟಿಸಿದ್ದಾರೆ. ಹಿಂದಿಯಲ್ಲಿ ಕಾಲಾ ಧಾರಾವಾಹಿಯಲ್ಲೂ ಇವರು ಕಾಣಿಸಿಕೊಂಡಿದ್ದಾರೆ.