ಬೆಳಗಾವಿ: ಹುಲ್ಲು ತಿಂದು ಹಾಲು ನೀಡುವ ಗೋಮಾತೆಯನ್ನು ಇಳಿವಯಸ್ಸಿನಲ್ಲಿ ಕಸಾಯಿಖಾನೆಗೆ ಕಳುಹಿಸುವುದನ್ನು ತಪ್ಪಿಸಲು ಮುಜರಾಯಿ ಇಲಾಖೆಯ ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ವತಿಯಿಂದ ಗೋಶಾಲೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಮುಜರಾಯಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
Advertisement
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 35 ಸಾವಿರಕ್ಕೂ ಅಧಿಕ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲಾಗುತ್ತಿದೆ. ಗೋ ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಭಾರತ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಗೋರಕ್ಷಣೆ ಮಹತ್ವದ್ದಾಗಿದೆ. ತಾಯಿ ಹಾಲಿನಷ್ಟೇ ಹಸುವಿನ ಹಾಲು ಪ್ರಾಮುಖ್ಯತೆ ಹೊಂದಿದೆ. ತಾಯಿ ಹಾಲು ಇಲ್ಲದಿದ್ದರೂ ಹಸುವಿನ ಹಾಲು ಕುಡಿದು ನಾವು ಬದುಕಿದ್ದೇವೆ ಎಂದರು. ಇದನ್ನೂ ಓದಿ: ನಟ ದಿ. ಪುನೀತ್ ಮನೆಗೆ ಭೇಟಿ ನೀಡಿ ಸಿಎಂ ಸಾಂತ್ವನ
Advertisement
Advertisement
250 ಕ್ಕೂ ಮೇಲ್ಪಟ್ಟ ದೇವಸ್ಥಾನಗಳಲ್ಲಿ ಮುಂಬರುವ ದಿನಗಳಲ್ಲಿ ಗೋಶಾಲೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲಾವಾರು ‘ಎ’ ಮತ್ತು ‘ಬಿ’ ಗ್ರೇಡ್ ದೇವಸ್ಥಾನಗಳ ಪಟ್ಟಿ ಪಡೆದುಕೊಂಡು ಗೋಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಅದಲ್ಲದೆ ಅರ್ಚಕರ ಕುಟುಂಬಕ್ಕೆ ಆರೋಗ್ಯ ವಿಮೆ ಒದಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
Advertisement
ಈ ಮೊದಲು ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿದ ಹಸು ಹಾಗೂ ಕರುವಿಗೆ ಶಶಿಕಲಾ ಜೊಲ್ಲೆ ಅವರು ಗೋಧೂಳಿ ಶುಭ ಮುಹೂರ್ತದಲ್ಲಿ ಗೋಮಾತೆಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನ್ನಿಸಿ ಗೋಗ್ರಾಸವನ್ನು ನೀಡಿದರಲ್ಲದೇ ಧೂಪ-ದೀಪಗಳಿಂದ ಪೂಜೆಯನ್ನು ನೆರವೇರಿಸುವ ಮೂಲಕ ರಾಜ್ಯದಾದ್ಯಂತ ದೀಪಾವಳಿ(ಬಲಿಪಾಡ್ಯಮಿ) ದಿನದಂದು ಅಧಿಸೂಚಿತ ದೇವಸ್ಥಾನಗಳಲ್ಲಿ “ಗೋ ಪೂಜಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಜರಾಯಿ ಇಲಾಖೆಯ ವತಿಯಿಂದ ನಗರದ ಶ್ರೀ ಕಪಿಲೇಶ್ವರ ಮಂದಿರದಲ್ಲಿ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಇತರೆ ಗಣ್ಯರು ಗೋಪೂಜೆಯನ್ನು ನೆರವೇರಿಸಿದರು. ಇದನ್ನೂ ಓದಿ: ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ
ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಶಾಸಕ ಅಭಯ್ ಪಾಟೀಲ್ ಮಾತನಾಡಿ, ಸರ್ಕಾರವು ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ಆರಂಭಿಸುವ ಮೂಲಕ ಗೋಮಾತೆಗೆ ಪ್ರಾಮುಖ್ಯತೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಬೆಳಗಾವಿ ಸಂಸದರಾದ ಮಂಗಲಾ ಅಂಗಡಿ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ