ಹೈದರಾಬಾದ್: ಭಾರತದ ಸ್ಟಾರ್ ಬ್ಯಾಡ್ಮಿಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಅವರು ಸದ್ಯ ರಾಷ್ಟ್ರೀಯ ತಂಡದ ತರಬೇತುದಾರ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಕೋಚ್ ಇಬ್ಬರಿಗೂ ಬೇರೆ ಬೇರೆ ಕೇಂದ್ರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಿಚಂದ್, ಇದು ತರಬೇತಿ ತಂಡದ ನಿರ್ಧಾರವಾಗಿದ್ದು, ಇಬ್ಬರು ಆಟಗಾರ್ತಿಯರ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಪ್ರತ್ಯೇಕ ತರಬೇತಿ ನೀಡಿದ್ದು, ಇಬ್ಬರು ಆಟಗಾರ್ತಿಯರ ಕುರಿತು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸದ್ಯ ಈ ತೀರ್ಮಾನದ ಹಿನ್ನೆಲೆಯಲ್ಲಿ ಗೋಪಿಚಂದ್ ಅವರ ಆಕಾಡೆಮಿಯ ತರಬೇತಿ ಸಮಯವನ್ನು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಗೋಪಿಚಂದ್ ಹೇಳಿದ್ದಾರೆ.
ಸದ್ಯ ಗೋಪಿಚಂದ್ ಅವರು ಎರಡು ಆಕಾಡೆಮಿಗಳನ್ನು ಹೊಂದಿದ್ದು, ಅರ್ಧ ಕಿಮೀ ಅಂತರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಇದ್ದ ಹಳೆಯ ತರಬೇತಿ ಕೇಂದ್ರದ ಅಲ್ಪ ದೂರದಲ್ಲೇ ಮತ್ತೊಂದು ಹೊಸ ಕೇಂದ್ರ ಸ್ಥಾಪನೆ ಕೆಲ ವರ್ಷಗಳ ಹಿಂದೆ ಆರಂಭ ಮಾಡಲಾಗಿತ್ತು.
2014 ರಲ್ಲಿ ಗೋಪಿಚಂದ್ ತರಬೇತಿ ಕೇಂದ್ರದಿಂದ ಹೊರ ನಡೆದಿದ್ದ ಸೈನಾ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ಮತ್ತೆ ಸೈನಾ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದಿರುಗಿದ್ದರು. ವಿಶ್ವ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದ ನಂತರ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದುರುಗಿ ಪಿವಿ ಸಿಂಧೂ ರನ್ನು ಮಣಿಸಿ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ತರಬೇತಿ ತಂಡದ ಈ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಧೂ ತಂದೆ, ಸದ್ಯ ನಿಗಧಿ ಮಾಡಿರುವ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೋಪಿಚಂದ್ ಅವರು ಎಲ್ಲಾ ಆಟಗಾರರಿಗೂ ಒಂದೇ ಸಮಯವನ್ನು ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ಏನನ್ನು ಕೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಪ್ರತ್ಯೇಕ ತರಬೇತಿ ಯಾಕೆ?
ಸೈನಾ ಮತ್ತು ಸಿಂಧೂಗೆ ಪ್ರತ್ಯೇಕ ತರಭೇತಿ ನೀಡುತ್ತಿರುವುದು ಯಾಕೆ ಎನ್ನುವುದನ್ನು ಯಾರು ಅಧಿಕೃತವಾಗಿ ತಿಳಿಸಿಲ್ಲ. ಇಬ್ಬರಿಗೆ ಪ್ರತ್ಯೇಕ ಅವಧಿಯಲ್ಲಿ ತರಬೇತಿ ನೀಡುತ್ತಿರುವುದರ ಹಿಂದೆ ಆಟಗಾರ್ತಿಯರ ಹಿತಾದೃಷ್ಟಿಯೂ ಕಾರಣವಾಗಿದೆ ಎನ್ನಲಾಗಿದೆ. ಇಬ್ಬರು ಒಂದೇ ಕಡೆ ಅಭ್ಯಾಸ ನಡೆಸಿದರೆ ದೌರ್ಬಲ್ಯಗಳು ತಿಳಿಯುವ ಕಾರಣ ಇಬ್ಬರನ್ನು ದೂರ ಇಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.